ಸಿಂದಗಿ: ಅತಿಯಾದ ರಸಗೊಬ್ಬರ, ಕೀಟನಾಶಕ ಮತ್ತು ನೀರು ಬಳಸುವ ಕೃಷಿಯಿಂದ ರೈತರು ಕೈ ಸುಟ್ಟಿಕೊಂಡಿದ್ದೇ ಹೆಚ್ಚು. ಇಂತಹ ಕೃಷಿಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವ ಜೊತೆಗೆ ಭೂಮಿಯ ಸತ್ವವೂ ಸಾಯುತ್ತದೆ. ಆದರೆ ಸಾವಯವ ಕೃಷಿ ಕೈಗೊಂಡು ಹೆಚ್ಚಿನ ಆದಾಯ ಗಳಿಸುವ ಜೊತೆಗೆ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಳ್ಳಲು ಸಾಧ್ಯ ಎಂಬುದನ್ನು ಇಲ್ಲಿನ ಯುವಕನೊಬ್ಬ ತೋರಿಸಿಕೊಟ್ಟಿದ್ದಾನೆ.
ರೈತರಿಗೆ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸಬೇಕು. ವಿಷಮುಕ್ತ ಆಹಾರ ಉತ್ಪಾದಿಸಬೇಕು ಎಂಬ ಮಹತ್ತರ ಗುರಿ ಇಟ್ಟುಕೊಂಡ ತಾಲೂಕಿನ ಹರನಾಳ ಗ್ರಾಮದ ಬಿಎಸ್ಸಿ (ಕೃಷಿ) ಪದವಿ ಪಡೆದ ಯುವಕ ಮಹಾದೇವ ಶಿವಶಂಕ್ರಪ್ಪ ಅಂಬಲಿ 2006ರಲ್ಲಿ ಪರಮಾನಂದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸುವ ಮೂಲಕ ಈ ಭಾಗದ ರೈತರಿಗೆ ಸಾವಯವ ಕೃಷಿ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಹಳ್ಳಿಯಲ್ಲಿ ಸ್ಥಾಪಿತವಾದ ಪರಮಾನಂದ ಗ್ರಾಮೀಣಾಭಿವೃದ್ಧಿ ಸಂಸ್ಥೆ ತನ್ನ 14 ವರ್ಷದ ಶ್ರಮದ ಫಲವಾಗಿ ಇಂದು ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಹಾಗೂ ಬೀದರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಾರ್ಯ ನಿರ್ವಹಿಸಿ ಸಾವಯವ ಕೃಷಿ ಕ್ರಾಂತಿ ಮಾಡುತ್ತಿದೆ. ಸಂಸ್ಥೆ ಈಗ ವಿಜಯಪುರ ಜಿಲ್ಲೆ ಸಾವಯವ ಕೃಷಿ ಪ್ರಾಂತಿಯ ಒಕ್ಕೂಟವಾಗಿ ಬೆಳೆದಿದೆ.
ಇದನ್ನೂ ಓದಿ :ಶಾಲೆ- ಕಾಲೇಜು ಆರಂಭದ ಬಗ್ಗೆ ಶೀಘ್ರವೇ ಸ್ಪಷ್ಟ ಮಾಹಿತಿ ಎಂದ ಡಿಸಿಎಂ ಅಶ್ವತ್ಥನಾರಾಯಣ
ಪರಮಾನಂದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಪ್ರಾರಂಭದ ದಿನದಲ್ಲಿ ತಾಲೂಕಿನಲ್ಲಿ 250 ಎಕರೆ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಅಳವಡಿಸಿತು. ಇಂದು ಸಾವಿರಾರು ಹೆಕ್ಟೇರ್ ಭೂಮಿ ಸಾವಯವ ಕೃಷಿ ಭೂಮಿಯಾಗಿ ಪರಿವರ್ತನೆಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಸಾಕಷ್ಟು ಪ್ರಶಸ್ತಿ ಪಡೆದು ಸಾಧನೆಯತ್ತ ಹೆಜ್ಜೆಯಿಡುತ್ತಿದೆ. ಯುವಕ ಮಹಾದೇವ ಅಂಬಲಿ ಸರಕಾರದ ವಿವಿಧ ಯೋಜನೆಗಳನ್ನು ಸಂಸ್ಥೆ ಮೂಲಕ ಸಾವಿರಾರು ರೈತರಿಗೆ ಎರೆಹುಳು ಗೊಬ್ಬರ ಘಟಕ, ಜೀವಸಾರ ಘಟಕ, ಜೀವಾಂಮೃತ ಘಟಕ ನಿರ್ಮಿಸಿಕೊಟ್ಟಿದ್ದಾರೆ.
ಲಾಕ್‌ಡೌನ್ ವೇಳೆ ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು ಮತ್ತು ತರಕಾರಿ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ಸಿರಿಧಾನ್ಯ ಕೃಷಿಯನ್ನು ಉತ್ತೇಜಿಸುವ ಸಲುವಾಗಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ವಿಜಯಪುರ ಜಿಲ್ಲೆ ಸಾವಯವ ಕೃಷಿ ಪ್ರಾಂತಿಯ ಒಕ್ಕೂಟ ಅಡಿಯಲ್ಲಿ ಮರುಳಾರಾಧ್ಯ ಶಿವಾಚಾರ್ಯರ ಸಿರಿಧಾನ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ.
– ರಮೇಶ ಪೂಜಾರ