Advertisement

ಅಕ್ಕಿ ಮುಹೂರ್ತಕ್ಕೆ ಸಾವಯವ ಕೃಷಿ ಸ್ಪರ್ಶ

12:50 AM Jan 29, 2019 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನಡೆಯುವ ನಿತ್ಯಾನ್ನ ದಾನಕ್ಕೆ ಸಾವಯವ ಉತ್ಪನ್ನಗಳನ್ನು ಬಳಸಲು ಮುಂದಿನ ಪರ್ಯಾಯ ಶ್ರೀ ಅದಮಾರು ಮಠದ ಆಡಳಿತ ಚಿಂತನೆ ನಡೆಸಿದೆ. ಪರ್ಯಾಯಕ್ಕೆ ಮುನ್ನ ನಡೆಯುವ ಅಕ್ಕಿ ಮುಹೂರ್ತದ ವೇಳೆ ಈ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.

Advertisement

ಈಗಾಗಲೇ ನಡೆದ ಬಾಳೆ ಮುಹೂರ್ತದಲ್ಲಿ ಚಾರ ಸಮೀಪದಲ್ಲಿ ಬಾಳೆ ಕೃಷಿ ನಡೆಸಲು ಚಾಲನೆ ನೀಡಿದ ಅದಮಾರು ಶ್ರೀಗಳು, ಜ. 30ರ ಬೆಳಗ್ಗೆ ನಡೆಯುವ ಅಕ್ಕಿ ಮುಹೂರ್ತದಲ್ಲಿ ಸಾವಯವ, ದೇಸೀ ಕೃಷಿಗೆ ಮಹತ್ವ ಕೊಡಲು ನಿರ್ಧರಿಸಿದ್ದಾರೆ.

ನೇರ ಖರೀದಿ
ಅದಮಾರು ಮಠದ ಆನಂದ ಸಮಿತಿ ಸದಸ್ಯರು ಕಾರ್ಕಳ, ಶಿರಸಿ ಮೊದಲಾದೆಡೆ ಈಗಾಗಲೇ ಇರುವ ಸಾವಯವ ಕೃಷಿಕರನ್ನು ಸಂಪರ್ಕಿಸಿದ್ದು ಬೀಜ ಬಿತ್ತನೆ ಸಮಯದೊಳಗೆ ಮತ್ತಷ್ಟು ಸಂಪರ್ಕ ಮಾಡುವ ಇರಾದೆ ಹೊಂದಿದ್ದಾರೆ. ರಾಜ್ಯದಲ್ಲಿ ಸುಮಾರು 120 ದೇಸೀ ಭತ್ತದ ತಳಿಗಳಿವೆ ಎನ್ನಲಾಗುತ್ತಿದೆ. ಇವುಗಳಲ್ಲಿ ಕೆಂಪಕ್ಕಿ, ಮಂಜುಗುಣಿ ಸಣ್ಣಕ್ಕಿ, ಪದ್ಮ ಮೊದಲಾದ 16 ತಳಿಗಳನ್ನು ಸಮಿತಿ ಗುರುತಿಸಿದೆ. ಕೃಷಿಕರು ಬೆಳೆದ ಅಕ್ಕಿಯನ್ನು ನೇರವಾಗಿ ಶ್ರೀಕೃಷ್ಣ ಮಠದಿಂದ ಖರೀದಿಸಲು ಚಿಂತನೆ ನಡೆಸಲಾಗಿದೆ. ಇದರಿಂದ ಮಧ್ಯ ವರ್ತಿಗಳ ಪಾತ್ರ ಇಲ್ಲವಾಗಿ ಕೃಷಿಕರಿಗೆ ಹೆಚ್ಚಿನ ಆದಾಯ ದೊರಕುತ್ತದೆ. ರಸಗೊಬ್ಬರ ರಹಿತವಾಗಿ ಬೆಳೆದ ಧಾನ್ಯ ಆರೋಗ್ಯಕ್ಕೂ ಪುಷ್ಟಿದಾಯಕ. ದೇವರ ನೈವೇದ್ಯಕ್ಕೆ ನಿತ್ಯ ಸುಮಾರು 60-70 ಕೆ.ಜಿ. ಅಕ್ಕಿ ಬೇಕು. ಇದನ್ನು ಕಟ್ಟಿಗೆಯಿಂದ ಬೇಯಿಸುತ್ತಾರೆ. ಸಾರ್ವಜನಿಕ ಸಂತರ್ಪಣೆಯ ಅನ್ನವನ್ನು ಬಾಯ್ಲರ್‌ಗಳಲ್ಲಿ ತಯಾರಿಸಲಾಗುತ್ತದೆ.

ದೇಸೀ ಕೃಷಿ ಪ್ರಕ್ರಿಯೆಗೆ ಚಾಲನೆ ನೀಡುವ ಅಕ್ಕಿ ಮುಹೂರ್ತದಲ್ಲಿ ಪರಂಪರಾಗತ ರಾಜ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಆಗಮಿಸಲಿದ್ದಾರೆ. ಜ. 30ರ ಬೆಳಗ್ಗೆ 7.30ರಿಂದ 10.30ರ ವರೆಗೆ ಅದಮಾರು ಮಠದ ಆವರಣದಲ್ಲಿ ಸ್ವಾಮೀಜಿಯವರ ಸಮ್ಮುಖ ಅಕ್ಕಿ ಮುಹೂರ್ತ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next