Advertisement

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

08:43 PM Apr 23, 2024 | Team Udayavani |

ಗದಗ: ನಗರದ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾಮಹೋತ್ಸವದ ಅಂಗವಾಗಿ ಹುಣ್ಣಿಮೆಯ ದಿನವಾದ ಮಂಗಳವಾರ ಸಂಜೆ ಚಿತ್ತಾ ನಕ್ಷತ್ರದಲ್ಲಿ ಭಕ್ತ ಜನಸಾಗರದ ನಡುವೆ ಮಹಾರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.

Advertisement

ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಜನತೆಯ ಹರ್ಷೋದ್ಘಾರದ ನಡುವೆ ಮಹಾರಥೋತ್ಸವವು ಸಾಗಿ ಬಂದಿತು. ಶ್ರೀ ಗುರುಬಸವಲಿಂಗಾಯ ನಮಃ, ಸಿದ್ಧಲಿಂಗಾಯ ನಮಃ, ಸಾಂಬಶಿವ ಸಿದ್ಧಲಿಂಗ ಎಂದು ಭಕ್ತರು ಜಯಘೋಷ ಮೊಳಗಿಸಿದರು. ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ರಥೋತ್ಸವಕ್ಕೆ ಮುನ್ನ ಪರಂಪರೆಯಂತೆ ವೀರನಾರಾಯಣ ರಸ್ತೆಯಲ್ಲಿರುವ ಎಸ್.ಎಸ್. ಕಳಸಾಪೂರಶೆಟ್ಟರ ಅವರ ನಿವಾಸದಲ್ಲಿ ಡಾ. ತೋಂಟದ ಸಿದ್ಧರಾಮ ಶ್ರೀಗಳ ಪೂಜೆ, ಪ್ರಸಾದ ನಡೆಯಿತು. ತದನಂತರ ಅಲಂಕೃತ ತೆರೆದ ವಾಹನದಲ್ಲಿ ಶ್ರೀಗಳ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಬಂದಿತು. ಮೆರವಣಿಗೆಯಲ್ಲಿ ಜನತೆ ಕಾದು ನಿಂತು ಮಾಲಾರ್ಪಣೆ ಮಾಡುವ ಮೂಲಕ ಪೂಜ್ಯರ ದರ್ಶನಾಶೀರ್ವಾದ ಪಡೆದರು. ರಸ್ತೆಯುದ್ದಕ್ಕೂ ಭಕ್ತರು, ರಂಗೋಲಿಯನ್ನು ಹಾಕಿ ಭಕ್ತಿಭಾವ ದಿಂದ ಪೂಜ್ಯರನ್ನು ಸ್ವಾಗತಿಸಿದರು.

ತೋಂಟದಾರ್ಯ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ನಡೆದ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳು ಕೂಡದೇ ಬಸವಣ್ಣನವರ ಹಾಗೂ ಸಿದ್ಧಲಿಂಗೇಶ್ವರರ ಭಾವಚಿತ್ರಗಳನ್ನು ಮತ್ತು ಬಸವಾದಿ ಶರಣರ ವಚನದ ಕಟ್ಟುಗಳನ್ನು ಇಟ್ಟು ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next