Advertisement

ಮಣ್ಣಿನ ಸತ್ವ ಕಾಪಾಡಲು ಸಾವಯವ ಕೃಷಿ ಸೂಕ್ತ

12:20 AM Jul 11, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಅಧಿಕವಾದ್ದರಿಂದ ಅಲ್ಲಿ ಭೂಮಿಯ ಜೀವಸತ್ವಗಳು ಬಸಿದು ಹೋಗುತ್ತವೆ. ಮಣ್ಣಿನ ಸತ್ವವನ್ನು ಸುಧಾರಿಸಿಕೊಳ್ಳದೆ ಹೋದರೆ ಪ್ರಯೋಜನವಿಲ್ಲ, ಅದಕ್ಕೆ ಸಾವಯವ ವಿಧಾನವೇ ಸೂಕ್ತ.

Advertisement

ಮೂಲತಃ ಕರ್ನಾಟಕದವರಾಗಿದ್ದು ಪ್ರಸ್ತುತ ಮಹಾರಾಷ್ಟ್ರ ಕೊಲ್ಹಾಪುರದ ಸಿದ್ಧಗಿರಿಯಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿರುವ, ಸಾವಯವ, ದೇಸೀ ಗೋತಳಿ ಸಂರಕ್ಷಣೆಯನ್ನು ಕೈಗೆತ್ತಿಕೊಂಡಿರುವ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಯವರ ಖಚಿತ ನುಡಿ ಇದು.

ಜು. 13ರಂದು ಮಂಗಳೂರಿಗೆ ಮೊದಲ ಬಾರಿಗೆ ಆಗಮಿಸಿ, ಕರಾವಳಿ ಭಾಗದ ಕೃಷಿಕರೊಂದಿಗೆ ಸಾವಯವ ಕೃಷಿ ಕುರಿತ ಸಂವಾದ ನಡೆಸಲಿರುವ ಸ್ವಾಮೀಜಿ “ಉದಯವಾಣಿ’ ಜತೆ ಚುಟುಕಾಗಿ ಮಾತನಾಡಿದ್ದಾರೆ.

ಸೊರಗಿರುವ ಮಣ್ಣು ಚೇತರಿಸಲಿ
ಕರಾವಳಿಯಲ್ಲಿ ತೆಂಗು, ಅಡಿಕೆಗೆ ಅಗತ್ಯ ಪೋಷಕಾಂಶಗಳು ಇಲ್ಲದೆ ಅಪಾಯದಂಚಿನಲ್ಲಿವೆ. ಯಾವುದೇ ಬೆಳೆ ಇದ್ದರೂ ಸೊರಗಿರುವ ಮಣ್ಣನ್ನು ಬಲಿಷ್ಠಗೊಳಿಸುವುದು ಆಗಬೇಕಾದ ಮುಖ್ಯ ಕೆಲಸ. ಪಂಚಭೂತಗಳ ಅಸಮತೋಲನದಿಂದಲೇ ಇಂದು ರೋಗಗಳು ಹೆಚ್ಚುತ್ತಿರು ವುದು. ಅದರಲ್ಲೂ ಮಣ್ಣಿಗೆ ರಾಸಾಯನಿಕ ಸುರಿದಿರು ವುದರಿಂದ ಬೆಳೆ ವಿಷಮಯ. ಮಣ್ಣು ವಿಷಮುಕ್ತವಾದಾಗ ಗಾಳಿ, ನೀರು, ಆಹಾರ ಎಲ್ಲವೂ ಪರಿಶುದ್ಧಗೊಳ್ಳುತ್ತವೆ.

ಸಾವಯವ ಇಂಗಾಲ ಕುಸಿತ
ನಮ್ಮ ಮಣ್ಣಿನಲ್ಲಿ ಸಾವಯವ ಇಂಗಾಲ ಶೇ. 3ರಷ್ಟಿದ್ದುದು ಈಗ ಶೇ. 0.3ಕ್ಕೆ ಇಳಿದಿದೆ. ಎಂದರೆ ಇದರಿಂದಾಗಿ ಮಣ್ಣಿನಲ್ಲಿರುವ ನೀರು ಹಾಗೂ ಗಾಳಿ ಹಿಡಿದಿರಿಸುವ ಕ್ಷಮತೆ ಕಡಿಮೆಯಾಗಿದೆ. ಹಿಂದೆ ಮಣ್ಣು ಹಲವು ಜೀವಾಣುಗಳ ಬ್ಯಾಂಕ್‌ ಆಗಿದ್ದು, ಈಗ ಅವುಗಳೆಲ್ಲ ರಾಸಾಯನಿಕಗಳಿಂದ ಸತ್ತಿವೆ. ಭೂಮಿ ಬರಡಾಗುತ್ತಿದೆ.

Advertisement

ಸವಾಲಿನ ಕೆಲಸ
ನಾವು ದೇಶಾದ್ಯಂತ ಸಾವಯವ ಅಭಿಯಾನದಲ್ಲಿ ತೊಡಗಿದ್ದೇವೆ. ಸಾವಯವಕ್ಕೆ ಈಗ ಪ್ರೋತ್ಸಾಹ ಸಿಗುತ್ತಿರುವುದು ನಿಜ. ಆದರೆ ಸವಾಲುಗಳು ಈಗಲೂ ಇವೆ. ಜನ ರಾಸಾಯನಿಕ ಬಳಸಿ ರೂಢಿಯಾಗಿದೆ. ಅವರನ್ನು ಈ ಪದ್ಧತಿಗೆ ತರಲು ಸಮಯ ತಗಲುತ್ತದೆ. ಸ್ವಲ್ಪ ಜಾಗದಲ್ಲಿ ಮಾಡಿ ನೋಡಿ ಎಂದು ಮನವೊಲಿಸುತ್ತೇವೆ. ಮಣ್ಣಿನಲ್ಲಿರುವ 16 ಪೋಷಕಾಂಶಗಳ ಪ್ರಮಾಣ ಏರಿಕೆಯಾದರೆ ಹೆಚ್ಚಾದರೆ ಅವೇ ಬೆಳೆಯಲ್ಲಿ ವ್ಯಕ್ತಗೊಂಡು ರುಚಿ, ಪೌಷ್ಠಿಕತೆ ಹೆಚ್ಚಾಗುತ್ತದೆ. ಅದನ್ನು ಮನಗಂಡು ಬಳಿಕ ಅವರು ಪರಿವರ್ತನೆಗೊಳ್ಳುತ್ತಾರೆ.

ಜು. 13ರಂದು
ಬರುವವರಿಗೆ ಸಂದೇಶ
ನಮ್ಮ ಮನೆಗೆ ಬೇಕಾದ್ದು ನಮ್ಮಲ್ಲೇ ಬೆಳೆಯುವುದು ಅದರ ಜತೆಗೆ ಜನರಿಗೂ ವಿಷಮುಕ್ತ ಅನ್ನ ಕೊಡುವುದು ಎನ್ನುವ ಮನೋಭಾವದಿಂದ ಬನ್ನಿ. ನಮ್ಮ ರೋಗ ಕಡಿಮೆ ಮಾಡಿಕೊಳ್ಳಲು ಭೂಮಿ ಚೆನ್ನಾಗಿರಬೇಕು. ಬೇಕಾದ ಅನ್ನ ವಿಷಮುಕ್ತವಾಗಿರಬೇಕು. ಇದರ ತಯಾರಿಯಲ್ಲಿ ಬನ್ನಿ.

ಸ್ವಾಮೀಜಿಯ ಬಗ್ಗೆ
ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಅವರು ಮಠದ ವತಿಯಿಂದ ಕೈಗೊಳ್ಳುವ ಶಿಕ್ಷಣ, ಆರೋಗ್ಯ, ಗ್ರಾಮಗಳ ಅಭಿವೃದ್ಧಿ, ಸಾವಯವ ಕೃಷಿ, ಆತ್ಮನಿರ್ಭರ ಸಮಾಜವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋದವರು. ಪ್ರಸ್ತುತ ದೇಶಾದ್ಯಂತ ಸಾವಯವ ವ್ಯವಸಾಯ ಹಾಗೂ ದೇಸೀ ಗೋವುಗಳ ಸಂರಕ್ಷಣೆ, ಅಭಿವೃದ್ಧಿ ವಿಚಾರದಲ್ಲಿ ಲಕ್ಷಾಂತರ ಮಂದಿಯನ್ನು ಬೆಸೆದವರು. ಜು. 13ರಂದು ಮಂಗಳೂರಿನ ಬಾಳಂಭಟ್‌ ಹಾಲ್‌ನಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ಹಮ್ಮಿಕೊಂಡಿರುವ ಬೆಳಗ್ಗೆ 9ರಿಂದ ನಡೆಯುವ ಗೋ ಆಧರಿತ ಸಾವಯವ ಕೃಷಿ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next