Advertisement

ಅಂಗಾಂಗ ದಾನದಿಂದ ಹಲವು ಜೀವ ಉಳಿಸಲು ಸಾಧ್ಯ- ಡಾ| ಸದಾನಂದ ಪೂಜಾರಿ

12:37 AM Oct 27, 2023 | Team Udayavani |

ಮಂಗಳೂರು: ಅಂಗಾಂಗ ದಾನದ ಮೂಲಕ ಮತ್ತೂಬ್ಬರಿಗೆ ಮರು ಜೀವ ನೀಡಲು ಸಾಧ್ಯವಿದೆ. ಇತರ ಕಾಯಿಲೆಗಳಿಲ್ಲದೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ 8 ಅಂಗಾಂಗಗಳನ್ನು ದಾನ ಮಾಡಬಹುದು. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಾಗಿದೆ ಎಂದು ವೆನ್ಲಾಕ್‌ ಆಸ್ಪತ್ರೆಯ ಯೂರೋಲಜಿ ವಿಭಾಗದ ಮುಖ್ಯಸ್ಥ ಹಾಗೂ ಕನ್ಸಲ್ಟೆಂಟ್‌ ಯೂರೋ ಸರ್ಜನ್‌ ಡಾ| ಸದಾನಂದ ಪೂಜಾರಿ ತಿಳಿಸಿದರು.

Advertisement

ಪಂಪ್‌ವೆಲ್‌ನಲ್ಲಿರುವ ಇಂಡಿಯಾನ ಆಸ್ಪತ್ರೆಯಲ್ಲಿ ಗುರುವಾರ ನಡೆದ ಅಂಗಾಂಗ ದಾನದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಗಾಂಗ ದಾನಕ್ಕೆ ಸಂಬಂಧಿಸಿ ದೇಶದಲ್ಲಿ ಸಮರ್ಪಕ ಕಾನೂನು ಜಾರಿಯಲ್ಲಿದೆ. ಇದರ ಪ್ರಕಾರವೇ ಅಂಗಾಂಗ ದಾನ ಪ್ರಕ್ರಿಯೆ ನಡೆಸಬೇಕು. ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಮೂಲಕ ನೋಂದಣಿಗೊಳಿಸಿ ಕುಟುಂಬಸ್ಥರೊಂದಿಗೆ ಮಾಹಿತಿ ಹಂಚಿಕೊಳ್ಳಬೇಕಾಗುತ್ತದೆ. ಕುಟುಂಬಸ್ಥರ ಅನುಮತಿ ಇಲ್ಲದೆ ಅಂಗಾಂಗ ದಾನ ಮಾಡುವುದು ಅಸಾಧ್ಯ ಎಂದು ತಿಳಿಸಿದರು.
ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ| ಯೂಸುಫ್‌ ಕುಂಬ್ಳೆ ಮಾತನಾಡಿ, ಅಂಗಾಂಗಗಳಿಗೆ ವಿಪರೀತ ಬೇಡಿಕೆ ಇದ್ದರೂ, ಅಂಗಾಂಗಗಳು ಸಿಗದ ಕಾರಣ ರೋಗಿಗಳು ಸಂಕಷ್ಟಪಡುವಂತಾಗಿದೆ.

ಸರಕಾರದ ಹಂತದಿಂದಲೇ ಜನರಲ್ಲಿ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಜಾತಿ, ಧರ್ಮ, ನಂಬಿಕೆಯ ವಿಚಾರಗಳು ಅಂಗಾಂಗ ದಾನಕ್ಕೆ ತಡೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರನ್ನು ಜಾಗೃತರನ್ನಾಗಿಸಬೇಕು. ದೇಶದೆಲ್ಲೆಡೆ ಅಂಗಾಂಗ ದಾನಕ್ಕೆ ಸಂಬಂಧಿಸಿ ಏಕರೂಪದ ಕಾನೂನನ್ನು ಜಾರಿಗೆ ತರಬೇಕು ಎಂದು ತಿಳಿಸಿದರು.
ಕಿಡ್ನಿ ಕಸಿ ತಜ್ಞ ಡಾ| ಪ್ರದೀಪ್‌ ಮಾತನಾಡಿ, ನೂರು ಜನರ ಪೈಕಿ ಹತ್ತು ಜನರಲ್ಲಿ ಕಿಡ್ನಿ ಸಮಸ್ಯೆ ಕಂಡುಬರುತ್ತಿದ್ದು, ಇದಕ್ಕೆ ಆರಂಭಿಕ ಹಂತದಲ್ಲೇ ಎಚ್ಚರ ವಹಿಸಿಕೊಳ್ಳಬೇಕು. ಕಿಡ್ನಿ ಸಮಸ್ಯೆ ಬಂದಲ್ಲಿ ಕಿಡ್ನಿ ಕಸಿ ಮಾಡುವುದು ಸೂಕ್ತ ಆಯ್ಕೆಯಾಗಿದ್ದು ರೋಗಿ ಆರೋಗ್ಯವನ್ನು ಮತ್ತೆ ಪಡೆದುಕೊಳ್ಳಬಹುದು ಎಂದರು.

ಇಂಡಿಯಾನ ಅಸ್ಪತ್ರೆಯ ಅಧ್ಯಕ್ಷ ಡಾ|ಅಲಿ ಕುಂಬ್ಳೆ, ಪ್ರಮುಖರಾದ ಮುಜೀಬ್‌ ರೆಹೆಮಾನ್‌, ಡಾ| ಶ್ರವಣ್‌, ಡಾ| ಅನ್ವಿತಾ, ಡಾ| ಪ್ರದೀಪ್‌ ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next