“ಓರಿಯೋ’ ಎಂಬ ಹೆಸರಿನ ಜನಪ್ರಿಯ ಬ್ರ್ಯಾಂಡ್‌ನ ಬಿಸ್ಕೆಟ್ ಹೆಸರನ್ನು ನೀವು ಕೇಳಿರುತ್ತೀರಿ. ಈಗ ಇದೇ “ಓರಿಯೋ’ ಎಂಬ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಂದಹಾಗೆ, ಈ ಸಿನಿಮಾದ ಹೆಸರು “ಓರಿಯೋ’ ಅಂತಿದ್ದರೂ, ಈ ಸಿನಿಮಾಕ್ಕೂ “ಓರಿಯೋ’ ಬಿಸ್ಕೆಟ್‌ಗೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಸಬ್ಜೆಕ್ಟ್ ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ, ತಮ್ಮ ಚಿತ್ರಕ್ಕೆ ಇಂಥದ್ದೊಂದು ಟೈಟಲ್ ಇಟ್ಟಿದೆಯಂತೆ!
ಕಂಠೀರವ ಸ್ಟುಡಿಯೋದಲ್ಲಿ ನಡೆದ “ಓರಿಯೋ’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಚಿತ್ರತಂಡ ಚಿತ್ರೀಕರಣಕ್ಕೆ ಚಾಲನೆ ನೀಡಿತು.
ಇನ್ನು “ಓರಿಯೋ’ ಚಿತ್ರದ ಟೈಟಲ್‌ಗೆ “ದಿ ಬ್ಲ್ಯಾಕ್ ಅಂಡ್ ವೈಟ್’ ಎಂಬ ಟ್ಯಾಗ್‌ಲೈನ್ ಇದ್ದು, ಲವ್, ಆ್ಯಕ್ಷನ್, ಹಾರರ್ ಮತ್ತು ಸಸ್ಪೆನ್ಸ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. ಈ ಹಿಂದೆ “ಪ್ರೀತಿಯ ಲೋಕ’ ಮತ್ತು “ಲವ್ ಇಸ್ ಪಾಯಿಸಸ್’ ಚಿತ್ರಗಳನ್ನು ನಿರ್ದೇಶಿಸಿದ್ದ ನಂದನ ಪ್ರಭು, “ಓರಿಯೋ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನವ ಪ್ರತಿಭೆ ನಿತಿನ್ ಗೌಡ “ಓರಿಯೋ’ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ಸುಚಿತ್, ಶುಭಿ, ಲತಾ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ:ಪಣಜಿ: ಸಾಮ್ರಾಟ್ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿ ಪಡೆದ ಉತ್ತರ ಕನ್ನಡದ ವಿದ್ಯಾರ್ಥಿನಿ
ಮುಹೂರ್ತದ ಬಳಿಕ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ನಂದನ ಪ್ರಭು, “ಐದು ಪ್ರಮುಖ ಪಾತ್ರಗಳ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಸುಮಾರು ಐದಾರು ವರ್ಷಗಳ ಕಾಲ ಕಥೆಯ ಮೇಲೆ ವರ್ಕ್ ಮಾಡಿ ಈ ಸಿನಿಮಾ ಮಾಡುತ್ತಿದ್ದೇವೆ. “ಓರಿಯೋ’ ಪದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥವಿದೆ. ನಮ್ಮ ಸಿನಿಮಾದಲ್ಲೂ ಅದಕ್ಕೆ ಬೇರೆಯದೇ ಒಂದು ವಿಶೇಷ ಅರ್ಥವಿದೆ. ಅಷ್ಟೇ ಅಲ್ಲದೇ, ಇಡೀ ವಿಶ್ವಕ್ಕೆ ಅನ್ವಯವಾಗುವಂಥ ಒಂದು ಮೆಸೇಜ್ ಕೂಡ ಸಿನಿಮಾದಲ್ಲಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು’ ಎಂದರು.
ಟ್ಯಾಕ್ಸಿ ಡ್ರೈವರ್ ಆಗಿರುವ ಮೂವರು ಹುಡುಗರು ನಿಗೂಢ ಕಾಡೊಂದಕ್ಕೆ ಹೋದಾಗ ಅಲ್ಲಿ ನಡೆಯುವ ನಿಗೂಢ ಘಟನೆಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ನಾಲ್ಕು ಭಾಷೆಗಳಲ್ಲಿ ಸಿನಿಮಾ ಬರುತ್ತಿದೆ ಎಂದು ಮಾಹಿತಿ ನೀಡಿತು ಚಿತ್ರತಂಡ. ಚಿತ್ರದ ಕಲಾವಿದರಾದ ನಿತಿನ್ ಗೌಡ, ಸುಚಿತ್, ಶುಭಿ, ಲತಾ ಚಿತ್ರದಲ್ಲಿ ತಮ್ಮ ಪಾತ್ರ ಮತ್ತು ಮಾಡಿಕೊಂಡಿರುವ ತಯಾರಿಗಳ ಬಗ್ಗೆ ಮಾತನಾಡಿದರು. “ಶಿವಾಂಜನೇಯ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ವಿಜಯಶ್ರೀ ಆರ್. ಎಂ, ವೈಶಾಲಿ ವೈ. ಜೆ, ಕೃಷ್ಣಪ್ಪ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಸಾಯಿಕಿರಣ್ ಸಂಗೀತ ಸಂಯೋಜಿಸುತ್ತಿದ್ದಾರೆ.