ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ ಸಂತ್ರಸ್ಥೆ ಲಿಷಾ ಅವರಿಗೆ ರಾಜ್ಯ ಗೃಹ ರಕ್ಷಕ ದಳ ಹಾಗೂ ಪೌರ ರಕ್ಷಣಾ ಇಲಾಖೆಯಲ್ಲಿ ಗ್ರೂಪ್ “ಸಿ’ (ಪ್ರಥಮ ದರ್ಜೆ ಸಹಾಯಕಿ-ಎಫ್ಡಿಎ) ಹುದ್ದೆ ನೀಡಿರುವ ನೇಮಕಾತಿ ಆದೇಶ ಪತ್ರವನ್ನು ರಾಜ್ಯಸರ್ಕಾರ ಹೈಕೋರ್ಟ್‌ಗೆ ಮಂಗಳವಾರ ಸಲ್ಲಿಸಿತು.
ಬಾಂಬ್ ಬ್ಲಾಸ್ಟ್ ಪ್ರಕರಣದ ಸಂತ್ರಸ್ಥೆಯಾಗಿರುವ ಲಿಷಾ ನಾಲ್ಕು ವರ್ಷಗಳ ಸುಧೀರ್ಘ ಕಾನೂನು ಹೋರಾಟ ನಡೆಸಿ ಸರ್ಕಾರಿ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಲಿಷಾಗೆ ಗ್ರೂಪ್ “ಸಿ’ ಎಫ್ಡಿಎ ಹುದ್ದೆ ನೀಡಿರುವ ಕುರಿತು ನ್ಯಾಯಮೂರ್ತಿ ಜಯಂತ್ ಪಟೇಲ್ ಹಾಗೂ ಎಸ್.ಸುಜಾತ ಅವರಿದ್ದ ವಿಭಾಗೀಯ ಪೀಠದ ಮುಂದೆ ಸರ್ಕಾರದ ಪರ ವಕೀಲರು ಹಾಜರಾಗಿ, ನೇಮಕಾತಿ ಆದೇಶ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಈ ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥಪಡಿಸಿತು.
ರಾಜ್ಯಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಈ ಮೊದಲು ರಾಜ್ಯ ಸರ್ಕಾರ ಲಿಷಾ ಅವರ ವೈದ್ಯಕೀಯ ಚಿಕಿತ್ಸಾ ವೆಚ್ಚಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10,17,078 ರೂ ಹಾಗೂ ಕೇಂದ್ರ ಸರ್ಕಾರ ಮೂರು ಲಕ್ಷ ರೂ. ನೀಡಿತ್ತು. ಇದೀಗ ಜುಲೈ 25ರಂದು ಲಿಷಾ ಅವರಿಗೆ ಗ್ರೂಪ್ “ಸಿ’ ಹುದ್ದೆ ನೀಡಿದೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದ್ದು , ಬೇರೆ ಯಾವುದೇ ಪ್ರಕರಣಗಳಲ್ಲಿ ಪೂರ್ವ ನಿದರ್ಶನವಾಗಿ ಪರಿಗಣಿಸತಕ್ಕದಲ್ಲ ಎಂದು ವಿವರಣೆ ನೀಡಲಾಗಿದೆ.
ಲಿಷಾ ಪರ ವಕಾಲತ್ತು ವಹಿಸಿ, ಕೋರ್ಟ್‌ಗೆ ಬೇಕಾದ ದಾಖಲೆಗಳನ್ನು ಸ್ವಂತ ಖರ್ಚಿನಲ್ಲಿಯೇ ಪಡೆದುಕೊಂಡಿದ್ದೇನೆ. ನಾಲ್ಕು ವರ್ಷಗಳ ಬಳಿಕ ಕಾನೂನು ಹೋರಾಟದಲ್ಲಿ ಜಯ ದೊರೆತಿದ್ದು ಖುಷಿ ನೀಡಿದೆ. ಈ ವಿಚಾರದಲ್ಲಿ ಮಹತ್ತರ ಆದೇಶ ನೀಡಿದ ಹೈಕೋರ್ಟ್ ಹಾಗೂ ಆದೇಶ ಪಾಲಿಸಿದ ರಾಜ್ಯಸರ್ಕಾರಕ್ಕೆ ಅಭಿನಂದನೆಗಳು
-ಸುನೀಲ್‌ಕುಮಾರ್, ಲಿಷಾ ಪರ ವಕೀಲ