ಹನೂರು: ಕ್ಷೇತ್ರ ವ್ಯಾಪ್ತಿಯ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ಮಾಡುವ ಸರ್ಕಾರದ ನಿರ್ಧಾರದಿಂದ ತಾಲೂಕಿನ ಪದವಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಆತಂಕಕ್ಕೆ ಒಳಗಾಗಿದ್ದಾರೆ. ಈ ಭಾಗದಲ್ಲಿ ಇದು ಬಿಟ್ಟರೆ ಯಾವುದೇ ಸರ್ಕಾರಿ, ಖಾಸಗಿ ಕಾಲೇಜುಗಳೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಲೇ ಜನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ವರ್ಗಾಯಿಸಿರುವುದು ಆತಂಕ ಮೂಡಿಸಿದೆ.
ಅಧಿಕಾರಿಗಳಿಂದ ಸುಳ್ಳು ವರದಿ: ಸರ್ಕಾರ 100 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳ ಪಟ್ಟಿ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಆದರೆ, ಹನೂರು ಸರ್ಕಾರಿ ಪ್ರಥಮ ರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನಲ್ಲಿ 325 ವಿದ್ಯಾರ್ಥಿಗಳಿದ್ದರೂ 100ಕ್ಕೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅಲ್ಲದೆ, ಈ ಭಾಗದಲ್ಲಿ ಇರುವ ಏಕೈಕ ಕಾಲೇಜು ಎಂಬುದನ್ನು ಮರೆಮಾಚಿ 3 ಕಾಲೇಜುಗಳಿವೆ ಎಂದೂ ಸುಳ್ಳು ವರದಿ ಸರ್ಕಾರಕ್ಕೆ ನೀಡಿದ್ದಾರೆ.
ಖಾಸಗಿ ಸಂಸ್ಥೆ ಕೈವಾಡ: ಕಳೆದ 4-5 ವರ್ಷ ಗಳಿಂದ ಹನೂರಲ್ಲಿ ಖಾಸಗಿ ಕಾಲೇಜು ತೆರೆಯಲು ಶಿಕ್ಷಣ ಸಂಸ್ಥೆಯೊಂದು ಪ್ರಯತ್ನಿಸುತ್ತಿತ್ತು. ಕಟ್ಟಡ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಸೇರಿ ಅಗತ್ಯ ಸವಲತ್ತುಗಳುಳ್ಳ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣವೂ ನೀಡಲಾಗುತ್ತಿತ್ತು. ಇಂತಹ ಸಮಯದಲ್ಲಿ ಏಕಾಏಕಿ ಕಾಲೇಜು ಸ್ಥಳಾಂತರಕ್ಕೆ ಖಾಸಗಿ ಸಂಸ್ಥೆಯ ಕೈವಾಡ ಇದೆಯೇ ಎಂಬ ಅನುಮಾನವೂ ಕಾಡುತ್ತಿದೆ.
ಹನೂರು ಪದವಿ ಕಾಲೇಜು ಸ್ಥಳಾಂತರ, ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರುವ ಪ್ರಮಾದ. ಈಗಾಗಲೇ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ್‌ರ ಜತೆ ಮಾತನಾಡಿರುವೆ. ಕಾಲೇಜು ಉಳಿಸಿಕೊಳ್ಳಲು ಶ್ರಮಿಸುವೆ.
-ಆರ್.ನರೇಂದ್ರ, ಶಾಸಕ
* ವಿನೋದ್ ಎನ್.ಗೌಡ