Advertisement

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

05:50 PM Dec 18, 2024 | Team Udayavani |

ಮಡಿಕೇರಿ: ಗ್ಯಾಸ್ ಸೋರಿಕೆಯಾಗಿ ತನ್ನ ಪೋಷಕರ ಕಳೆದುಕೊಂಡ ಪುತ್ರಿಗೆ ಮಂಗಳೂರಿನ ಎಚ್.ಪಿ. ಗ್ಯಾಸ್ ಸಂಸ್ಥೆ ಮತ್ತು ಮುಂಬೈನ ಎಸ್.ಬಿ.ಐ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾಲಿಸಿಯ ಮೊತ್ತ ಮತ್ತು ಮಾನಸಿಕ ವೇದನೆಗೆ ಒಟ್ಟು 28 ಲಕ್ಷ ರೂ.ಗಳ ಪರಿಹಾರ ಪಾವತಿಸುವಂತೆ ಕೊಡಗು ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.

Advertisement

ಸುಂಟಿಕೊಪ್ಪ ನಿವಾಸಿಯಾಗಿದ್ದ ಎಚ್.ಕೆ.ರಮೇಶ್ ಮತ್ತು ಎನ್.ರೂಪಾ ದಂಪತಿ ಎಚ್.ಪಿ ಸಂಸ್ಥೆಯ ಗ್ಯಾಸ್ ಸಂಪರ್ಕ ಪಡೆದಿದ್ದರು. 2023ರ ಅ.4ರಂದು ರಾತ್ರಿ 8.30ಕ್ಕೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂದರ್ಭ ಗ್ಯಾಸ್ ಸೋರಿಕೆಯಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಚ್.ಕೆ.ರಮೇಶ್ ಮತ್ತು ಎನ್.ರೂಪಾ ತೀವ್ರ ಗಾಯಗೊಂಡು 2023ರ ಅ.8ರಂದು ರಮೇಶ್ ಮತ್ತು ಅ.9ರಂದು ಎನ್.ರೂಪಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಅಗ್ನಿ ದುರಂತದಲ್ಲಾದ  ನಷ್ಟಗಳಿಗೆ ಸಂಬಂಧಪಟ್ಟ ಸಂಸ್ಥೆಗಳಿಂದ ಯಾವುದೇ ಪರಿಹಾರ ದೊರಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೃತರ ಏಕೈಕ ಪುತ್ರಿಯಾದ ಕು.ಲಿಪಿಕಾ ಅಲಿಯಾಸ್ ಐಶ್ವರ್ಯಾ ಸೂಕ್ತ ಪರಿಹಾರ ಎದುರುದಾರರಿಂದ ದೊರಕಿಸಿಕೊಡಬೇಕು ಎಂದು ಅವರ ವಿರುದ್ಧ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಎರಡು ದೂರು ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಆಯೋಗದ ಅಧ್ಯಕ್ಷ ಸಿ.ರೇಣುಕಾಂಬ ಮತ್ತು ಸದಸ್ಯರಾದ ಗೌರಮ್ಮಣ್ಣಿ ಉಭಯ ಪಕ್ಷಗಳ ವಾದ-ಪ್ರತಿವಾದಗಳ ಚರ್ಚಿಸಿದ್ದರು. ಎರಡೂ ದೂರನ್ನು ಭಾಗಶಃ ಪುರಸ್ಕರಿಸಿದ ಆಯೋಗ, ಮಂಗಳೂರು ಎಚ್.ಪಿ. ಗ್ಯಾಸ್ ಸಂಸ್ಥೆ ಹಾಗೂ ಮುಂಬೈನ ಎಸ್.ಬಿ.ಐ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ದೂರುದಾರರಿಗೆ ಪಾಲಿಸಿಯ ಮೊತ್ತ ಮತ್ತು ಮಾನಸಿಕ ವೇದನೆ, ಖರ್ಚು ವೆಚ್ಚಗಳಿಗೆ ಒಟ್ಟು 28 ಲಕ್ಷ ರೂ.ಗಳ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next