Advertisement

Mouth Ulcers: ಬಾಯಿಯ ಹುಣ್ಣುಗಳು ಮತು ನಿರ್ವಹಣೆ

03:45 PM Feb 11, 2024 | Team Udayavani |

ಕ್ಯಾಂಕರ್‌ ಹುಣ್ಣುಗಳು ಎಂದೂ ಕರೆಯಲ್ಪಡುವ ಬಾಯಿ ಹುಣ್ಣುಗಳು ಬಾಯಿಯ ಒಳಗೆ ತುಟಿಯ ಒಳಭಾಗ, ಗಲ್ಲದ ಒಳಭಾಗ, ವಸಡುಗಳು ಅಥವಾ ನಾಲಗೆಯ ಮೇಲೆ ಕಾಣಿಸಿಕೊಳ್ಳುವ ಸಣ್ಣ ಹುಣ್ಣುಗಳು. ಇವುಗಳು ಸಾಮಾನ್ಯವಾಗಿ ವೃತ್ತಾಕಾರ ಅಥವಾ ಅಂಡಾಕಾರದಲ್ಲಿದ್ದು, ಕೇಂದ್ರಭಾಗ ಬಿಳಿ ಬಣ್ಣದಲ್ಲಿದ್ದರೆ ಸುತ್ತಲೂ ಕೆಂಪಗಿರುತ್ತದೆ. ಇವು ನೋವು ಸಹಿತವಾಗಿರುವುದರಿಂದ ಊಟ ಉಪಾಹಾರ ಸೇವನೆಯ ವೇಳೆ ತೊಂದರೆಯಾಗುತ್ತದೆ. ಬಾಯಿ ಹುಣ್ಣುಗಳು ಉಂಟಾಗಲು ಅನೇಕ ಕಾರಣಗಳಿರುತ್ತವೆ, ಬಹು ಅಂಶಗಳಿಂದಾಗಿಯೂ ಅವು ಉಂಟಾಗಬಹುದು. ಕೆಲವು ಕಾರಣಗಳು ಹೀಗಿವೆ:

  1. ಗಾಯ: ಅಕಸ್ಮಾತ್ತಾಗಿ ಕಚ್ಚಿಕೊಳ್ಳುವುದು, ಬಿರುಸಾಗಿ ಹಲ್ಲುಜ್ಜುವುದು ಅಥವಾ ದಂತವೈದ್ಯಕೀಯ ಚಿಕಿತ್ಸೆಯಿಂದಾಗಿ ಬಾಯಿ ಹುಣ್ಣುಗಳು ಉಂಟಾಗಬಹುದು.
  2. ಒತ್ತಡ: ಭಾವನಾತ್ಮಕ ಒತ್ತಡ ಅಥವಾ ಉದ್ವಿಗ್ನತೆಯಿಂದ ರೋಗ ನಿರೋಧಕ ಶಕ್ತಿ ಕುಗ್ಗಬಹುದು. ಇದರಿಂದಾಗಿ ಬಾಯಿ ಹುಣ್ಣುಗಳು ಉಂಟಾಗಲು ಪೂರಕ ಸ್ಥಿತಿ ನಿರ್ಮಾಣವಾಗಬಹುದು.
  3. ಕೆಲವು ಆಹಾರಗಳು: ಆಮ್ಲಿàಯ ಅಥವಾ ಮಸಾಲೆಯುಕ್ತ ಆಹಾರಗಳು, ಸಿಟ್ರಸ್‌ ಹಣ್ಣುಗಳು, ಬೀಜಗಳು ಮತ್ತು ಚಾಕಲೇಟ್‌ ಕೆಲವರಲ್ಲಿ ಬಾಯಿ ಹುಣ್ಣುಗಳನ್ನು ಉಂಟು ಮಾಡಬಹುದು.
  4. ಹಾರ್ಮೋನ್‌ ಬದಲಾವಣೆಗಳು: ವಿಶೇಷವಾಗಿ ಮಹಿಳೆಯರಲ್ಲಿ ಋತುಚಕ್ರದ ವೇಳೆ ಉಂಟಾಗುವ ಹಾರ್ಮೋನ್‌ ಬದಲಾವಣೆಗಳಿಂದಾಗಿ ಬಾಯಿ ಹುಣ್ಣು ತಲೆದೋರಬಹುದಾಗಿದೆ.
  5. ಅಂತರ್ಗತ ಅನಾರೋಗ್ಯಗಳು: ಕೆಲವು ಪ್ರಕರಣಗಳಲ್ಲಿ ಬಾಯಿ ಹುಣ್ಣುಗಳು ವಿಟಮಿನ್‌ ಕೊರತೆ, ಆಟೊಇಮ್ಯೂನ್‌ ಕಾಯಿಲೆಗಳು ಅಥವಾ ಜೀರ್ಣಾಂಗವ್ಯೂಹದ ಕಾಯಿಲೆಗಳಂತಹ ಅಂತರ್ಗತ ಸ್ಥಿತಿಗತಿ-ಅನಾರೋಗ್ಯಗಳಿಗೂ ಬಾಯಿ ಹುಣ್ಣುಗಳಿಗೂ ಸಂಬಂಧ ಇರುತ್ತದೆ.
Advertisement

ಬಾಯಿ ಹುಣ್ಣುಗಳ ನಿರ್ವಹಣೆಯು ಲಕ್ಷಣಗಳನ್ನು ಉಪಶಮನಗೊಳಿಸುವುದು ಮತ್ತು ಗುಣಪಡಿಸುವುದನ್ನು ಒಳಗೊಂಡಿರುತ್ತದೆ.

  1. ನೋವಿಗೆ ಉಪಶಮನ: ಔಷಧ ಮಳಿಗೆಗಳಲ್ಲಿ ಸಿಗುವ ಸ್ಥಳೀಯವಾಗಿ ಹಚ್ಚುವ ಅರಿವಳಿಕೆಗಳು ಅಥವಾ ಬಾಯಿಯ ಮೂಲಕ ತೆಗೆದುಕೊಳ್ಳುವ ಅನಾಲೆjಸಿಕ್‌ಗಳು ನೋವನ್ನು ನಿಭಾಯಿಸುವುದಕ್ಕೆ ನೆರವಾಗುತ್ತವೆ.
  2. ರಕ್ಷಣಾತ್ಮಕ ಕ್ರಮಗಳು: ಕಿರಿಕಿರಿ ಉಂಟು ಮಾಡುವ ಆಹಾರಗಳನ್ನು ವರ್ಜಿಸುವುದು, ಮೃದುವಾದ ಹಲ್ಲುಜ್ಜುವ ಬ್ರಶ್‌ ಉಪಯೋಗ ಮತ್ತು ಬಾಯಿಯ ನೈರ್ಮಲ್ಯ- ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವ ಮೂಲಕ ಬಾಯಿ ಹುಣ್ಣುಗಳು ಉಂಟಾಗದಂತೆ ತಡೆಯಬಹುದು.
  3. ಸ್ಥಳೀಯ ಚಿಕಿತ್ಸೆಗಳು: ಔಷಧಯುಕ್ತ ಮೌತ್‌ ರಿನ್ಸ್‌ ಅಥವಾ ಜೆಲ್‌ ಉಪಯೋಗದಿಂದ ಗುಣ ಹೊಂದುವುದಕ್ಕೆ ಸಹಾಯವಾಗುತ್ತದೆ. ಇವುಗಳಲ್ಲಿ ಕಾರ್ಟಿಕೊಸ್ಟಿರಾಯ್ಡ ಅಥವಾ ಆ್ಯಂಟಿಮೈಕ್ರೊಬಿಯಲ್‌ ಅಂಶಗಳಿರುತ್ತವೆ.
  4. ಆಹಾರಾಭ್ಯಾಸದಲ್ಲಿ ಬದಲಾವಣೆ: ಬಾಯಿ ಹುಣ್ಣು ಉಂಟಾಗಲು ಕಾರಣವಾಗುವಂತಹ ಆಹಾರವಸ್ತುಗಳನ್ನು ತಾತ್ಕಾಲಿಕವಾಗಿ ವರ್ಜಿಸುವುದರಿಂದ ತೊಂದರೆ ಕಡಿಮೆಯಾಗುತ್ತದೆ ಮತ್ತು ಗುಣಹೊಂದಲು ಪೂರಕವಾಗುತ್ತದೆ.
  5. ಒತ್ತಡ ನಿರ್ವಹಣೆ: ಧ್ಯಾನ, ಯೋಗ ಅಥವಾ ವಿಶ್ರಾಮದಾಯಕ ವ್ಯಾಯಾಮಗಳಿಂದ ಒತ್ತಡದಿಂದ ಉಂಟಾಗುವ ಬಾಯಿ ಹುಣ್ಣುಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಬಹುತೇಕ ಬಾಯಿ ಹುಣ್ಣುಗಳು ಒಂದೆರಡು ವಾರಗಳಲ್ಲಿ ಗುಣ ಹೊಂದುತ್ತವೆ. ಆದರೆ ಅವು ಪದೇಪದೆ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ದೀರ್ಘ‌ಕಾಲ ಇದ್ದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಕೆಲವು ಪ್ರಕರಣಗಳಲ್ಲಿ ಅಂತರ್ಗತ ಅನಾರೋಗ್ಯಗಳು ಬಾಯಿ ಹುಣ್ಣುಗಳಿಗೆ ಕಾರಣವಾಗಬಹುದಾಗಿದ್ದು, ಅವುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.

-ಡಾ| ಆನಂದದೀಪ್‌ ಶುಕ್ಲಾ,

ಅಸೋಸಿಯೇಟ್‌ ಪ್ರೊಫೆಸರ್‌,

Advertisement

ಎಂಸಿಒಡಿಎಸ್‌, ಮಾಹೆ,

ಮಣಿಪಾಲ

ಡಾ| ಅಮಾನ್‌ ಪ್ರತಾಪ್‌ ಸಿಂಗ್‌,

ಇಂಟರ್ನ್ ಎಂಸಿಒಡಿಎಸ್‌, ಮಾಹೆ,

ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್‌ ಸರ್ಜರಿ ವಿಭಾಗ, ಎಂಸಿಒಡಿಎಸ್‌, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next