ನವದೆಹಲಿ: ವಿಪಕ್ಷಗಳಿಗೆ ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲ. ಅವರಿಗೆ ಓಡಿ ಹೋಗುವುದು ಮಾತ್ರ ಗೊತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಜುಲೈ 03) ರಾಜ್ಯಸಭೆಯ ಕಲಾಪವನ್ನು ಬಹಿಷ್ಕರಿಸಿ ಹೊರನಡೆದ ವಿಪಕ್ಷಗಳಿಗೆ ಈ ಹೇಳಿಕೆ ಮೂಲಕ ತಿರುಗೇಟು ನೀಡಿದರು.
ಇದನ್ನೂ ಓದಿ:Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣದ ವೇಳೆ ತಮಗೆ ಮಧ್ಯಪ್ರವೇಶಿಸಲು ಅನುಮತಿ ನೀಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿನಂತಿಸಿಕೊಂಡಿದ್ದು, ಅದಕ್ಕೆ ಸಭಾಪತಿ ಜಗದೀಪ್ ಧನ್ಕರ್ ನಿರಾಕರಿಸಿದಾಗ, ಖರ್ಗೆ ನೇತೃತ್ವದಲ್ಲಿ ವಿಪಕ್ಷ ಸಂಸದರು ರಾಜ್ಯಸಭೆಯ ಕಲಾಪದಿಂದ ಹೊರನಡೆದ ಘಟನೆ ನಡೆಯಿತು.
ಈ ಜನರಿಗೆ (ಕಾಂಗ್ರೆಸ್) ಆಟೋ ಪೈಲಟ್ ಮತ್ತು ರಿಮೋಟ್ ಪೈಲಟ್ ಬಳಸಿ ಸರ್ಕಾರ ನಡೆಸುವವರು ಬೇಕಾಗಿದ್ದಾರೆ. ಅವರಿಗೆ ಅಭಿವೃದ್ಧಿ ಮೇಲೆ ನಂಬಿಕೆ ಇಲ್ಲ, ಹೇಗೆ ಕಾಯಬೇಕು ಎಂಬುದು ಚೆನ್ನಾಗಿ ತಿಳಿದುಕೊಂಡಿದ್ದಾರೆ ಎಂಬುದಾಗಿ ಪ್ರಧಾನಿ ಮೋದಿ ಟೀಕಾಪ್ರಹಾರ ನಡೆಸಿದ್ದರು.
ರಿಮೋಟ್ ಪದ ಉಪಯೋಗಿಸಿ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆ ಪರೋಕ್ಷವಾಗಿ ಟೀಕಿಸಿದ್ದಕ್ಕೆ ಆಕ್ರೋಶಗೊಂಡ ವಿಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರ ನಡೆದಿರುವುದಾಗಿ ವರದಿ ತಿಳಿಸಿದೆ.
ನಾವು ಕಳೆದ ಹತ್ತು ವರ್ಷಗಳಲ್ಲಿ ಏನು ಮಾಡಿದ್ದೇವೆ ಎಂಬುದು ಜನರ ಕಣ್ಣ ಮುಂದಿದೆ. ಇನ್ನು ಏನಾಗಬೇಕು ಎಂಬುದು ಇನ್ನಷ್ಟೇ ಪ್ರಾರಂಭವಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.