ಶಿರಸಿ: ರಾಜ್ಯ ಸರ್ಕಾರ ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಕೈಬಿಡಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ಶರಾವತಿ ನದಿ ನೀರನ್ನು ಬೆಂಗಳೂರಿಗೆ
ಸಾಗಿಸುವ ಯೋಜನೆ ಕೈಗೆತ್ತಿಕೊಳ್ಳಬಾರದು. ಶರಾವತಿ ನದಿಗೆ ಅಘನಾಶಿನಿ ನದಿ ತಿರುಗಿಸುವ ಯೋಜನೆ ರೂಪಿಸುವ ಹಿಂಬಾಗಿಲ ಪ್ರಯತ್ನ ನಡೆದಿದೆ ಎಂದೂ ಹೇಳಿದರು.
Advertisement
ಅಘನಾಶಿನಿ ಕಣಿವೆ ಜನತೆ ಎಚ್ಚರದಿಂದ ಇರಬೇಕು. ಹಾವೇರಿ ಜಿಲ್ಲೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜಾರಿ ಮಾಡುವ ಬಗ್ಗೆ ಸಚಿವರು ಆಶ್ವಾಸನೆ ನೀಡುತ್ತಿರುವ ಸಂಗತಿ ಬಗ್ಗೆ ಬೇಡ್ತಿ ಕಣಿವೆ ಜನತೆ ಜಾಗೃತಿ ವಹಿಸಬೇಕಿದೆ. ಪ್ರಚಲಿತ ಭೂ ಕುಸಿತ, ಮೇಘಸ್ಫೋಟ, ಮಲೆನಾಡಿನ ಮಹಾಮಳೆಯಿಂದ ಪಶ್ಚಿಮ ಘಟ್ಟ ತತ್ತರಗೊಂಡಿದೆ. ಇನ್ನಷ್ಟು ಬೃಹತ್ ಅಭಿವೃದ್ಧಿಯೋಜನೆಗಳನ್ನು ತಡೆದುಕೊಳ್ಳುವ ಧಾರಣಾ ಸಾಮರ್ಥ್ಯ ಇಲ್ಲವಾಗಿದೆ ಎಂದರು. ಕರಾವಳಿ ತಿರದ ಮೀನುಗಾರರು, ರೈತರು ಉಪ್ಪು ನೀರು ಹೆಚ್ಚಾಗಿ ಅತಂತ್ರರಾಗುವ ಪರಿಸ್ಥಿತಿ ಬರಲಿದೆ.
Related Articles
Advertisement
ಮಲೆನಾಡಿಗೆ ಮಾರಕವಾದ ಬೃಹತ್ ಯೋಜನೆಗಳು ಬೇಡ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ ಅರಣ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆ ಜಾರಿ ಮಾಡಬೇಕು ಎಂದು ರೈತರು, ಮೀನುಗಾರರು, ವನವಾಸಿಗಳು ಒತ್ತಾಯಿಸಿದ್ದಾರೆ. ಈ ಮೇಲಿನ ಎಲ್ಲ ಅಂಶಗಳ ಕುರಿತು ಜನಪ್ರತಿನಿಧಿಗಳು ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಧ್ವನಿ ಎತ್ತಬೇಕು. ಮಲೆನಾಡಿನ ಜನಪ್ರತಿನಿಧಿಗಳು ಒಂದಾಗಿ ಹೋರಾಟ ನಡೆಸಬೇಕು. ಇದಕ್ಕಾಗಿ ವಿಧಾನ ಸಭೆ ವಿಶೇಷ ಅಧಿವೇಶನ ನಡೆಸಬೇಕು ಎಂದು ಒತ್ತಾಯಿಸಿದರು.
ಅರಣ್ಯ ಸಚಿವರು ಪಶ್ಚಿಮ ಘಟ್ಟದಲ್ಲಿ ಇಂತಹ ಬೃಹತ್ ಯೋಜನೆಗಳ ಅರಣ್ಯ ಪರವಾನಿಗೆ ನೀಡಬಾರದು. ವನ್ಯಜೀವಿ ಪರವಾನಗಿ ನೀಡಬಾರದು. ಶರಾವತಿ ಭೂಗತ ಯೋಜನೆ ಬಗ್ಗೆ ಸಾಗರ, ಹೊನ್ನಾವರಗಳಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಬೇಕು. ರಾಜ್ಯದ ಅರಣ್ಯ ಸಚಿವರು ಶರಾವತಿ ನದಿ ಕಣಿವೆಗೆ ಭೇಟಿ ನೀಡಬೇಕು. ಕೇಂದ್ರ ಪರಿಸರ ಅರಣ್ಯ ಮಂತ್ರಾಲಯ ಶರಾವತಿ ಅಘನಾಶಿನಿ, ಬೇಡ್ತಿ ಕಣಿವೆ ಪರಿಸ್ಥಿತಿ ಪರಿಶೀಲನೆಗೆ ಉನ್ನತ ಅಧಿಕಾರಿಗಳ ತಂಡ ಕಳಿಸಬೇಕು ಎಂದರು. ಈ ವೇಳೆ ವಕ್ಷಲಕ್ಷ ಆಂದೋಲನದ ವಿಶ್ವನಾಥ, ಗಣಪತಿ ಬಿಸಲಕೊಪ್ಪ ಇದ್ದರು.
ಪಶ್ಚಿಮ ಘಟ್ಟದಲ್ಲಿ ಹಲವು ಪರಿಸರ ನಾಶಿ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದ ವೇಳೆ ಹೋರಾಟದಮೂಲಕ ಸ್ಥಗಿತಗೊಳಿಸಲಾಗಿದೆ.
●ಅನಂತ ಹೆಗಡೆ ಅಶೀಸರ,
ಅಧ್ಯಕ್ಷರು, ವೃಕ್ಷಲಕ್ಷ ಆಂದೋಲನ.