ಬೆಂಗಳೂರು: ಬಿಬಿಎಂಪಿ ವತಿಯಿಂದ ಶಿವಾನಂದ ವೃತ್ತದ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಸ್ಥಳೀಯ ನಾಗರಿಕರಿಂದ ವಿರೋಧ ವ್ಯಕ್ತವಾಗಿದ್ದು, ಭಾನುವಾರ ವಿವಿಧ ನಾಗರಿಕ ಸಂಘಟನೆಗಳು ಮಾನವ ಸರಪಳಿ ರಚಿಸಿ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿದವು.
“ಉಕ್ಕಿನ ಸೇತುವೆಯಿಂದ ಮರಗಳಿಗೆ ಹಾನಿಯಾಗುವುದರಿಂದ ಕಾಮಗಾರಿ ಕೈಬಿಡಬೇಕು,’ ಎಂದು ಆಗ್ರಹಿಸಿದರು. ಯೋಜನೆಯ ಅನುಷ್ಠಾನಕ್ಕಾಗಿ 26 ಮರಗಳನ್ನು ಕತ್ತರಿಸಬೇಕಾಗಿದೆ. ಯೋಜನೆ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.
“ಸರ್ಕಾರ ಕೈಗೆತ್ತಿಕೊಂಡಿರುವ ಉಕ್ಕಿನ ಸೇತುವೆ ಯೋಜನೆಗಾಗಿ ಮರಗಳನ್ನು ಕತ್ತರಿಸಬೇಕಿದೆ. ಇದರಿಂದ ಹಲವಾರು ಪಕ್ಷಿಗಳು ತಮ್ಮ ಮನೆಗಳನ್ನು ಕಳೆದುಕೊಳ್ಳಲಿವೆ. ಹೀಗಾಗಿ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸುತ್ತಿದ್ದೇವೆ,’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ನಿವಾಸಿ ಕೃಷ್ಣ ಅವರು ಅಭಿಪ್ರಾಯಪಟ್ಟರು.
“ಶಿವಾನಂದ ವೃತ್ತದ ಬಳಿ ಉಕ್ಕಿನ ಸೇತುವೆ ನಿರ್ಮಿಸುವುದು ಸರ್ಕಾರದ ಮೂರ್ಖತನದ ನಿರ್ಣಯವಾಗಿದೆ. ಉಕ್ಕಿನ ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಸಂಚಾರ ದಟ್ಟಣೆ ಪ್ರಮಾಣ ಹೆಚ್ಚಾಗಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನಂತರ ರಸ್ತೆ ಕಿರಿದಾಗಲಿದ್ದು, ರೈಲ್ವೆ ಕೆಳ ಸೇತುವೆ ಅಗಲ ಕಡಿಮೆಯಿರುವುದರಿಂದ ದಟ್ಟಣೆ ಹೆಚ್ಚಾಗುತ್ತಿದೆ.
ಆ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಲಿ’ ಎಂದು ಕುಮಾರ ಕೃಪಾದ ನಿವಾಸಿ ಚೇತನ್ ಕುಮಾರ್ ತಿಳಿಸಿದರು. ರೇಸ್‌ಕೋರ್ಸ್ ರಸ್ತೆಯಿಂದ ಹರೆಕೃಷ್ಣ ರಸ್ತೆ ಹಾಗೂ ಶೇಷಾದ್ರಿಪುರ ರೈಲ್ವೇ ಕೆಳಸೇತುವೆಗೆ ಉಕ್ಕಿನ ಸೇತುವೆ ಸಂಪರ್ಕ ಕಲ್ಪಿಸಲು 50 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ವತಿಯಿಂದ ಯೋಜನೆ ರೂಪಿಸಿದೆ.