ಕುಂದಗೋಳ: ಪಟ್ಟಣದ ಅಜ್ಜನಬಾವಿ ಪ್ರದೇಶದಲ್ಲಿ ಒತ್ತುವರಿ ಮಾಡಿದ ಮನೆಗಳನ್ನು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲು ಮುಂದಾದ ಪಪಂ ಅಧಿಕಾರಗಳೊಂದಿಗೆ ಸ್ಥಳೀಯರು ವಾಗ್ವಾದ ನಡೆಸಿದ ಘಟನೆ ಗುರುವಾರ ನಡೆದಿದೆ.
ಈ ಮೊದಲು ಅಲ್ಲಿನ ನಿವಾಸಿ ರಾಜೇಸಾಬ್ ಕಳ್ಳಿಮನಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥವಾಗಿತ್ತು. ರಾಜೇಸಾಬ್ ಕಳ್ಳಿಮನಿ ಅವರಿಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾನಪ್ಪನ ಮಠದ ಹತ್ತಿರವಿರುವ ಪ್ಲಾಟ್‌ನಲ್ಲಿ ಎರಡು ಪ್ಲಾಟ್‌ಗಳನ್ನು ನೀಡುವುದು.
ಎದುರುಗಾರ ಕಳ್ಳಿಮನಿ ಅವರು ನಿರ್ಮಿಸಿರುವ ಕಟ್ಟಡವನ್ನು 15 ದಿನದೊಳಗೆ ತೆರವು ಮಾಡಬೇಕು. ಇಲ್ಲವಾದರೆ ಪಟ್ಟಣ ಪಂಚಾಯಿತಿಯವರು ತೆರವುಗೊಳಿಸಬೇಕು ಎಂದು ಕೋರ್ಟ್‌ನ ಆದೇಶ ಪತ್ರದಲ್ಲಿ ಉಲ್ಲೇಖನವಾಗಿದೆ. ಅದರಂತೆ ಪಪಂ ಮುಖ್ಯಾಧಿ ಕಾರಿ ಪಿ. ಇಬ್ರಂಡಿ ಅವರು ಮನೆ ತೆರವುಗೊಳಿಸಲು ಮುಂದಾದಾಗ ಕೆಲ ಸಾರ್ವಜನಿಕರು ಅಡ್ಡಿಪಡಿಸಿದರು.
ಈ ವೇಳೆ ಪಪಂ ಮುಖ್ಯಾಧಿಕಾರಿ ಮತ್ತು ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಕುರಿತು ಮುಖ್ಯಾಧಿಕಾರಿ ಅವರನ್ನು ಮಾತನಾಡಿಸಿದಾಗ, “ನ್ಯಾಯಾಲಯದ ಆದೇಶದಂತೆ ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ವೈಯಕ್ತಿಕವಾಗಿ ಯಾರು ಮೇಲೆ ದ್ವೇಷ ಇಲ್ಲ.
ಎಸ್.ಎಫ್.ಸಿ ಅನುದಾನದಲ್ಲಿ 25 ಲಕ್ಷ ರೂ.ಗಳನ್ನು ಮಾರುಕಟ್ಟೆ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಕಳೆದ 2 ವರ್ಷದಿಂದ ಪಪಂ ಅಭಿವೃದ್ಧಿಗೆ ಬರಬೇಕಾದ ಸುಮಾರು ಮೂರು ಕೋಟಿ ರೂ. ಬಂದಿಲ್ಲ. ಇದರಿಂದ ಪಟ್ಟಣದ ಅಭಿವೃದ್ಧಿಗೆ ತೊಂದರೆಯಾಗಿದೆ’ ಎಂದು ಹೇಳಿದರು.