ದಾವಣಗೆರೆ: 2018-19ನೇ ಸಾಲಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಶಿಕ್ಷಣದ ಶುಲ್ಕ ಹೆಚ್ಚಿಸುವ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿ ಸಮೂಹವನ್ನು ಆ ಕೋರ್ಸ್‌ಗಳ ವ್ಯಾಸಂಗದಿಂದ ದೂರ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಜಯದೇವ ವೃತ್ತದಲ್ಲಿ ಪ್ರತಿಭಟಿಸಿದರು.
ಕಳೆದ ವರ್ಷ ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಕೋರ್ಸ್‌ಗೆ 16,700 ರೂಪಾಯಿ ಶುಲ್ಕ ಪಡೆಯಲಾಗುತ್ತಿತ್ತು. ಈ ವರ್ಷ 300 ಪಟ್ಟು ಅಂದರೆ 50 ಸಾವಿರ ಹೆಚ್ಚಿಸಲಾಗಿದೆ. ಖಾಸಗಿ ಕಾಲೇಜುಗಳಲ್ಲಿ ಕಳೆದ ಸಾಲಿನಲ್ಲಿದ್ದ 77 ಸಾವಿರ ರೂಪಾಯಿ ಶುಲ್ಕವನ್ನು 97,350 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆದಂತಹವರು 6,32,500 ರೂಪಾಯಿ ಕಟ್ಟಬೇಕಾಗಿತ್ತು. ಈ ವರ್ಷ ಶೇ. 8ರಂತೆ 6,83,500 ರೂ. ನಿಗದಿಪಡಿಸಲಾಗಿದೆ. ಸರ್ಕಾರದ ಅವೈಜ್ಞಾನಿಕ, ವಿದ್ಯಾರ್ಥಿ ವಿರೋಧಿ ನಿರ್ಧಾರದಿಂದ ಬಡ ಪ್ರತಿಭಾವಂತ ವಿದ್ಯಾರ್ಥಿ ಸಮೂಹಕ್ಕೆ ವೈದ್ಯಕೀಯ ಕೋರ್ಸ್ ಎಂಬುದು ಅಕ್ಷರಶಃ ಗಗನಕುಸುಮವಾಗಲಿದೆ. ಅಷ್ಟೊಂದು ದುಬಾರಿ ಶುಲ್ಕ ತೆತ್ತು ಅಭ್ಯಾಸ ಮಾಡಲಿಕ್ಕಾಗದೆ ಅನೇಕರು ವೈದ್ಯರಾಗುವ ಕನಸನ್ನು ಕೈ ಬಿಡಬೇಕಾಗುತ್ತದೆ. ಸರ್ಕಾರ ಕೂಡಲೇ ಶುಲ್ಕ ಇಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ವರ್ಷ ಇದ್ದಂತಹ 14,400 ರೂಪಾಯಿ ಶುಲ್ಕವನ್ನು ಈ ಬಾರಿ 40 ಸಾವಿರಕ್ಕೆ ಏರಿಸಲಾಗಿದೆ. ಏಕಾಏಕಿ ಶೇ. 250 ರಷ್ಟು ಹೆಚ್ಚಿಸಿರುವುದು ನಿಜಕ್ಕೂ ಆಘಾತಕಾರಿ. ಖಾಸಗಿ ಕಾಲೇಜಿನಲ್ಲಿ 49,500 ರೂಪಾಯಿ ಇದ್ದಂತಹ ಶುಲ್ಕವನ್ನು 63,030 ರೂ.ಗೆ ನಿಗದಿಪಡಿಸಲಾಗಿದೆ. ಶೇ.27 ರಷ್ಟು ಹೆಚ್ಚಿಸಲಾಗಿದೆ.
ಖಾಸಗಿ ಕಾಲೇಜುಗಳಲ್ಲಿ 4.29 ಲಕ್ಷ ಇದ್ದ ಶುಲ್ಕ 4,63,250 ರೂಪಾಯಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈಗ ಸರ್ಕಾರ ಏಕಾಏಕಿ ವೈದ್ಯಕೀಯ, ದಂತ ವೈದ್ಯಕೀಯ ಶುಲ್ಕ ಹೆಚ್ಚಳ ಮಾಡಿರುವುದು ಉನ್ನತ ಶಿಕ್ಷಣ ಬರೀ ಶ್ರೀಮಂತರ ಸ್ವತ್ತು ಎಂಬ ಸಂದೇಶ ನೀಡಿದಂತಾಗಿದೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ನಿಂತಿದೆ. ಬಡ ಪ್ರತಿಭಾವಂತರು ವೈದ್ಯರು, ದಂತ ವೈದ್ಯರಾಗಲಿಕ್ಕೆ ಸಹಕರಿಸಬೇಕಾದ ಸರ್ಕಾರವೇ ಶುಲ್ಕ ಹೆಚ್ಚಿಸುವ ಮೂಲಕ ಹೊರೆ ಉಂಟು ಮಾಡಿದೆ. ರಾಜ್ಯ ಸರ್ಕಾರ ಕೂಡಲೇ ಶುಲ್ಕ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ, ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆ ಜಿಲ್ಲಾ ಸಂಚಾಲಕ ರಾಮು ವರ್ಣೇಕರ್, ಗಗನ್, ಕೊಟ್ರೇಶ್, ಹರ್ಷ, ಶರತ್, ವಿವೇಕ್, ಸುಹಾಸ್, ಸ್ವಾತಿ, ಸ್ನೇಹಾ ಇತರರು ಇದ್ದರು.