Advertisement

ಕೇಂದ್ರ ಬಜೆಟ್‌ಗೆ ವಿರೋಧ

10:19 AM Feb 03, 2019 | |

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 2019ರ ಮಧ್ಯಂತರ ಬಜೆಟ್ ವಿರೋಧಿಸಿ ಸಿಐಟಿಯು ನೇತೃತ್ವದಲ್ಲಿ ಶನಿವಾರ ಕಾರ್ಮಿಕರು ಪ್ರತಿಭಟನೆ ನಡೆಸಿದರು.

Advertisement

ನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಕಾರ್ಮಿಕರು, ಮಧ್ಯಂತರ ಬಜೆಟ್ ಮಂಡನೆ ಮೂಲಕ ಕೇಂದ್ರ ಸರಕಾರ ದೇಶದ ಜನ ಸಮುದಾಯವನ್ನು ದಾರಿ ತಪ್ಪಿಸುವ ವ್ಯರ್ಥ ಪ್ರಯತ್ನ ನಡೆಸಿದೆ. ವಾಸ್ತವವಾಗಿ ರೈತರು, ಕಾರ್ಮಿಕರು ಮತ್ತು ಇತರೆ ಶೋಷಿತ ಜನ ಸಮುದಾಯಗಳು ನರೇಂದ್ರ ಮೋದಿ ಸರಕಾರದ ಕಾರ್ಪೊರೇಟ್ ಪರವಾದ ನೀತಿಗಳಿಗೆ ಪ್ರಬಲ ಪ್ರತಿರೋಧ ವ್ಯಕ್ತಪಡಿಸಿದ್ದರು.

ಆರ್ಥಿಕ ಮಿತವ್ಯಯದ ನೆಪ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡದೆ ವಂಚಿಸುವ ಕೆಲಸ ಮಾಡಿತ್ತು. ಹಣಕಾಸು ಸಚಿವರೇ ರೈತರ ಪರ ನಿಲ್ಲುವುದು ಅಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಇಂಥ ಸ್ಥಿತಿಯಲ್ಲಿ ಆಡಳತ ನಡೆಸಿದ ಐದು ವರ್ಷ ಸುಮ್ಮನಿದ್ದ ಸರ್ಕಾರ ಸುಧಾರಣೆ ನೆಪದಲ್ಲಿ ದೇಶಿಯ ಹಾಗೂ ವಿದೇಶಿ ಬಂಡವಾಳಗಾರರನ್ನು ಹರಿಬಿಟ್ಟು, ಮುದ್ದು ಸೇವಕನಾಗಿ ದೇಶದ ಸಂಪನ್ಮೂಲಗಳನ್ನು ಲೂಟಿ ಹೊಡೆಯಲು ಅವಕಾಶ ನೀಡಿದ್ದು, ಇದೀಗ ಮಧ್ಯಂತರ ಆಯವ್ಯಯದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ದೇಶದ ಸ್ವಾವಲಂಬನೆಗೆ ವಾಸ್ತವಿಕ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕಾರ್ಮಿಕರು ಹಲವು ದಶಕಗಳಿಂದ ಹೋರಾಡುತ್ತ್ತಿರುವ 18 ಸಾವಿರ ರೂ. ಕನಿಷ್ಠ ವೇತನದ ಪ್ರಸ್ತಾಪವಿಲ್ಲ. ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತ ಮಾಡಿ, ಕಾರ್ಮಿಕರಿಗೆ ಉದ್ಯೋಗ ದಿನಗಳ ಕಡಿತಕ್ಕೆ ಕಾರಣವಾಗಿದದೆ. ಅಸಂಘಟಿತ ಕಾರ್ಮಿಕರಿಗೆ ಯಾವೊಂದು ಯೋಜನೆ ರೂಪಿಸಿಲ್ಲ. ಬದಲಾಗಿ ಗೋ ರಕ್ಷಣೆಗೆ 750 ಕೋಟಿ ರೂ. 40 ಕೋಟಿ ಅಸಂಘಟಿತರಿಗೆ ಪಿಂಚಣಿಗಾಗಿ ಕೇವಲ 500 ಕೋಟಿ ರೂ. ಪ್ರಕಟಿಸುವ ಮೂಲಕ ತಮ್ಮ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಒಬ್ಬ ಅಸಂಘಟಿತ ಕಾರ್ಮಿಕ 60 ವರ್ಷಕ್ಕೆ ಪಿಂಚಣಿ ಪಡೆಯಬೇಕಾದರೆ ಅವರು ನಿರಂತರವಾಗಿ ದೇಣಿಗೆ ಪಾವತಿಸುತ್ತಲೇ ಇರಬೇಕು ಎಂದು ದೂರಿದರು.

ಸಣ್ಣ-ಅತಿಸಣ್ಣ ರೈತ ಕುಟುಂಬಗಳಿಗೆ ದಿನಕ್ಕೆ 16.60 ರೂ.ನಂತೆ ವಾರ್ಷಿಕ 6 ಸಾವಿರ ರೂ. ನೀಡುವ ಭರವಸೆ ರೈತರಿಗೆ ಮಾಡಿದ ಅವಮಾನ. ಜನ ವಿರೋಧಿ ನೀತಿಗಳಿಂದ ಈಗಾಗಲೇ ಜನತೆಯ ಆಕ್ರೋಶ ಎದುರಿಸುತ್ತಿರುವ ಮೋದಿ ಸರಕಾರ, ಮತ್ತೆ ಅಧಿಕಾರಕ್ಕೇರುವ ಹುನ್ನಾರಕ್ಕಾಗಿ ಅಸ್ಪಷ್ಟ ಬಜೆಟ್ ಮಂಡಿಸಿದೆ ಎಂದು ಕಿಡಿ ಕಾರಿದರು.

Advertisement

ಅಣ್ಣಾರಾಯ ಈಳಗೇರ, ಲಕ್ಷ್ಮಣ ಹಂದ್ರಾಳ, ಭೀಮಶಿ ಕಲಾದಗಿ, ಸಂಗು ನಾಲ್ಕಮಾನ, ಸುನಂದಾ ನಾಯಕ, ಕಾಳಮ್ಮ ಬಡಿಗೇರ, ಭಾರತಿ ವಾಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next