ಚಿತ್ತಾಪುರ: ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಪ್ರಯುಕ್ತ ಜ. 8, 9ರಂದು ಭಾರತ್ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ನಿಲ್ದಾಣದ ರಸ್ತೆ ಎದುರು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ದೇವಮ್ಮ ಅನ್ನದಾನಿ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ದತ್ತು ಕಾಳಗಿ ಮಾತನಾಡಿ, ದೇಶದಲ್ಲಿ ಕಾರ್ಮಿಕರ ಪರ 44 ಕಾನೂನುಗಳಿವೆ. ಅವುಗಳನ್ನು ಕೇಂದ್ರ ಸರ್ಕಾರ ಬದಲಿಸಿ ನಾಲ್ಕು ಕೋಡ್‌ಗಳಾಗಿ ಮಾಡಲು ಹೊರಟಿದೆ. ಜತೆಗೆ ಕಾರ್ಮಿಕರ ಕಾನೂನು ತಿದ್ದುಪಡಿ ಮಸೂದೆ ತರಲು ಮುಂದಾಗಿದೆ. ಒಂದು ವೇಳೆ ಮಸೂದೆಗೆ ಒಪ್ಪಿಗೆ ಸಿಕ್ಕರೆ ದೇಶದಲ್ಲಿರುವ ಕಾರ್ಮಿಕರು ಬೀದಿಗೆ ಬೀಳುತ್ತಾರೆ. ಆದ್ದರಿಂದ ಅದನ್ನು ಕೂಡಲೇ ಕೈ ಬೀಡಬೇಕು ಎಂದು ಆಗ್ರಹಿಸಿದರು.
ದಿನನಿತ್ಯ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ತಡೆಗಟ್ಟಬೇಕು. ಹೊಸ ಮತ್ತು ಸಭ್ಯ ಉದ್ಯೋಗಗಳನ್ನು ಸೃಷ್ಟಿಸಬೇಕು. ಕನಿಷ್ಟ 18 ಸಾವಿರ ರೂ. ವೇತನ ಜಾರಿಗೊಳಿಸಬೇಕು. ಕಾರ್ಮಿಕರ ಕಾನೂನುಗಳ ತಿದ್ದುಪಡಿ ನಿಲ್ಲಿಸಬೇಕು. ಸ್ಕೀಂ ನೌಕರರನ್ನು ಕಾಯಂ ಮಾಡಬೇಕು. ದೇಶದ ಎಲ್ಲ ಕಾರ್ಮಿಕರಿಗೂ ಸಾರ್ವತ್ರಿಕ, ಸಾಮಾಜಿಕ ರಕ್ಷಣೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದ್ದರೂ, ಭಾರತದಲ್ಲಿ ಮಾತ್ರ ದುಬಾರಿ ಬೆಲೆ ನೀಡುವಂತಾಗಿದೆ. ಅನೀಲ ಬೆಲೆಯೂ ಗಗನಕ್ಕೆ ಏರುತ್ತಿದೆ. ಪರಿಣಾಮ ಕೆಳ ವರ್ಗದ ಬಡ ಕಾರ್ಮಿಕರು ಸರಳ ಜೀವನ ನಡೆಸಲು ತುಂಬ ಕಷ್ಟಕರವಾಗಿದೆ. ಆದ್ದರಿಂದ ದಿನನಿತ್ಯ ಏರುತ್ತಿರುವ ಬೆಲೆಗಳನ್ನು ತಡಗಟ್ಟಬೇಕು ಎಂದು ಆಗ್ರಹಿಸಿದರು.
ಬೆಳಗ್ಗೆ 6 ಗಂಟೆಯಿಂದ ಆರಂಭಗೊಂಡು ಸಂಜೆ ವರೆಗೆ ಪಟ್ಟಣದ ಬಸ್ ನಿಲ್ದಾಣದ ಎದರು ಧರಣಿ ನಡೆಸಲಾಯಿತು. ಮಧ್ಯಾಹ್ನದ ಹೊತ್ತಿಗೆ ತಾಲೂಕಿನ ವಿವಿಧ ಕಡೆಯಿಂದ ಅಂಗನವಾಡಿ ನೌಕರರು, ವಿವಿಧ ಕಾರ್ಮಿಕರು, ಗ್ರಾಪಂ ನೌಕರರರು, ಬಿಸಿಯೂಟ ನೌಕರರು ಭಾಗವಹಿಸಿದ್ದರು. ಪ್ರತಿಭಟನಾಕಾರರು ರಸ್ತೆ ಮೇಲೆ ಅಡುಗೆ ಮಾಡಿ ಭೋಜನೆ ಮಾಡಿದರು. ಧರಣಿಯಲ್ಲಿ ಕ್ರಾಂತಿ ಗೀತೆಗಳು ಮೂಳಗಿದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಅಂಗಡಿ-ಮುಂಗಟ್ಟು, ಬ್ಯಾಂಕ್, ಸರ್ಕಾರಿ ಕಚೇರಿಗಳು ಯಥಾ ಸ್ಥಿತಿಯಲ್ಲಿದ್ದವು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಸ್‌ಗಳು ಹಾಗೂ ಪ್ರಯಾಣಿಕರಿಲ್ಲದೇ ಬಸ್ ನಿಲ್ದಾಣ ಬಿಕೋ ಎನ್ನುತಿತ್ತು. ಲಾರಿ, ಕ್ರಷರ್, ಆಟೋ, ಬೈಕ್ ಸವಾರರು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಿದರು. ಸಾರ್ವಜನಿಕರಿಂದ ಹಾಗೂ ವ್ಯಾಪರಸ್ಥರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಪ್ರತಿಭಟನಾ ಮೆರವಣಿಗೆ ಎಪಿಎಂಸಿಯಿಂದ ಆರಂಭವಾಗಿ ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಭುವನೇಶ್ವರ ಚೌಕ್, ಅಂಬೇಡ್ಕರ್ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಸ್ ನಿಲ್ದಾಣದ ಎದರು ಧರಣಿ ನಡೆಸಲಾಯಿತು.
ಬಿಸಿಯೂಟದ ಅಧ್ಯಕ್ಷೆ ಸಂಗೀತಾ ಗುತ್ತೇದಾರ, ಪಾರ್ವತಿ ಕಾಳಗಿ, ಸಾಬಮ್ಮ ನಾಲವಾರ, ಶೇಕಮ್ಮ ಕುರಿ, ಶಾಂತಾ ಗಾಯಕವಾಡ, ಜ್ಯೋತಿ ರಾಠೊಡ, ಸುವರ್ಣ ಶಾಂಪೂರಹಳ್ಳಿ, ಸುನೀತಾ, ವಿದ್ಯಾನಿ, ಗೀತಾ, ರೇಣುಕಾ, ರಾಚಯ್ಯ ಸ್ವಾಮಿ ಅಲ್ಲೂರ್, ಚಿತ್ರಶೇಖರ ದೇವರ್, ಮಲ್ಲಣ್ಣ ಹೊನಗುಂಟ್ಟಿ, ಜೈಪಾಲ ದಂಡೋತಿ, ಕಲ್ಯಾಣಿ ಭಾಗೋಡಿ, ರಮೇಶ ಕವಡೆ, ಜಗದೀಶ ಸಾಗರ, ರೇಣುಕಾ ಚಿಂಚೋಳಿ, ಸುಧಾಕರ ಸಾಲಹಳ್ಳಿ, ಭಾರತ್ ಶಹಾಬಾದ, ಮತ್ತಿತರರು ಪಾಲ್ಗೊಂಡಿದ್ದರು.