Advertisement

ವಿವೇಕನಗರ ವಾರ್ಡ್‌ನಲ್ಲಿ ಕ್ವಾರಂಟೈನ್‌ ಕೇಂದ್ರಕ್ಕೆ ವಿರೋಧ

05:05 AM May 15, 2020 | Suhan S |

‌ಕುಮಟಾ: ತಾಲೂಕಿನ ಹೆಗಡೆ ಗ್ರಾಮಕ್ಕೆ ತೆರಳುವ ರಸ್ತೆಯ ವಿವೇಕನಗರ ವಾರ್ಡ್ ನಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ತಾಲೂಕು ಆಡಳಿತದಿಂದ ಕ್ವಾರಂಟೈನ್‌ ಕೇಂದ್ರ ಮಾಡಲು ಗುರುವಾರ ಸಿದ್ಧತೆ ನಡೆಸಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Advertisement

ಕೋವಿಡ್  ವೈರಸ್‌ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು, ಈ ನಡುವೆಯೇ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವವರು ಅನುಮತಿ ಪಡೆದು ತಾಲೂಕಿಗೆ ಆಗಮಿಸುತ್ತಿದ್ದಾರೆ. ಅವರ ಕ್ವಾರಂಟೈನ್‌ಗೆ ಈ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದ್ದು, ಜನವಸತಿ ಪ್ರದೇಶವಾದ ವಿವೇಕನಗರದಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಕ್ವಾರಂಟೈನ್‌ ಕೇಂದ್ರ ಮಾಡುವುದರಿಂದ ಸ್ಥಳೀಯರಲ್ಲಿ ಭಯ ಕಾಡತೊಡಗಿದೆ. ಬೇರೆ ಕಡೆಗಳಿಂದ ಬಂದವರಿಗೆ ಯಾರಿಗಾದರೂ ಕೋವಿಡ್ ಸೋಂಕು ಇದ್ದರೆ, ಅದು ಇಡೀ ವಾರ್ಡ್‌ಗೆ ವ್ಯಾಪಿಸಬಹುದು. ಇಲ್ಲಿ ಕೇಂದ್ರ ಮಾಡುವ ಬದಲು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಕ್ವಾರಂಟೈನ್‌ ಕೇಂದ್ರ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ವಸತಿ ನಿಲಯದ ಒಳನುಗ್ಗಿದ ಸ್ಥಳೀಯರು: ವಸತಿ ನಿಲಯದಲ್ಲಿ ಕ್ವಾರಂಟೈನ್‌ ಕೇಂದ್ರ ಆರಂಭಿಸಲು ನಿಲಯದ ಸಿಬ್ಬಂದಿ ಸ್ವಚ್ಛತಾ ಕಾರ್ಯ ಆರಂಭಿಸಿರುವುದನ್ನು ಗಮನಿಸಿದ ನೂರಾರು ಸಾರ್ವಜನಿಕರು, ನಿಲಯದ ಮೇಲ್ವಿಚಾರಕರನ್ನು ತರಾಟೆಗೆ ತೆಗೆದುಕೊಂಡರು. ನಂತರ ಮೇಲ್ವಿಚಾರಕ ಅಸಮರ್ಪಕ ಉತ್ತರ ನೀಡಿರುವುದಕ್ಕೆ ಕೆರಳಿದ ಸ್ಥಳೀಯರು, ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಕ್ವಾರಂಟೈನ್‌ ಕೇಂದ್ರ ತೆರಯಬಾರದು. ಒಂದು ವೇಳೆ ಸ್ಥಳೀಯರ ವಿರೋಧದ ನಡುವೆಯೂ ಕ್ವಾರಂಟೈನ್‌ ಕೇಂದ್ರ ಆರಂಭಿಸಿದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಅಧಿಕಾರಿಗಳ ಸ್ಥಳಕ್ಕೆ ಬರಲು ಒತ್ತಾಯ: ತಹಶೀಲ್ದಾರ್‌ ಹಾಗೂ ಸಹಾಯಕ ಆಯುಕ್ತರು ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು. ನಂತರ ಸಹಾಯ ಆಯುಕ್ತ ಎಂ. ಅಜಿತ, ವಸತಿ ನಿಲಯದ ಮೇಲ್ವಿಚಾರಕರನ್ನು ದೂರವಾಣಿಮೂಲಕ ಸಂಪರ್ಕಿಸಿ, ಬೀಗ ಹಾಕುವಂತೆ ಸೂಚಿಸಿದರು. ನಂತರ ಮೇಲ್ವಿಚಾರಕರು ವಸತಿ ನಿಲಯದ ಬಾಗಿಲಿಗೆ ಬೀಗ ಹಾಕಿ ಸ್ಥಳದಿಂದ ತೆರಳಿದರು.

ನಂತರ ಸ್ಥಳಕ್ಕಾಗಮಿಸಿದ ಪಿಎಸ್‌ಐ ಆನಂದಮೂರ್ತಿ, ಸರ್ಕಾರಿ ಕಟ್ಟಡಗಳನ್ನು ಕ್ವಾರಂಟೈನ್‌ ಕೇಂದ್ರವಾಗಿ ಬಳಸಿಕೊಳ್ಳಲು ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಅದರಂತೆ ವಸತಿ ನಿಲಯಗಳನ್ನು ಹಾಗೂ ಸರ್ಕಾರಿ ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಲ್ಲಿ ಇರುವವರು ಸೋಂಕಿತರಲ್ಲ. ಒಂದು ವೇಳೆ ಈ ವಸತಿ ನಿಲಯವನ್ನು ಕ್ವಾರಂಟೈನ್‌ ಕೇಂದ್ರವಾಗಿ ಪರಿವರ್ತಿಸಲು ವಿರೋಧವಿದ್ದರೆ ಸಹಾಯಕ ಆಯುಕ್ತರ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದ ಅವರು, ಸ್ಥಳೀಯರಿಗೆ ಮನವೊಲಿಸಿ, ಸ್ವಚ್ಛತೆಯಲ್ಲಿ ತೊಡಗಿಕೊಂಡಿರುವ ಸಿಬ್ಬಂದಿ ಕಾರ್ಯಕ್ಕೆ ಏಕಾಏಕಿ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿ ಮೆನೆಗೆ ತೆರಳುವಂತೆ ಸೂಚಿಸಿದರು.

Advertisement

ಪುರಸಭಾ ಸದಸ್ಯೆ ಗೀತಾ ಮುಕ್ರಿ, ಸ್ಥಳೀಯರಾದ ತಿಮ್ಮಪ್ಪ ಮುಕ್ರಿ, ಹೊನ್ನಪ್ಪ ನಾಯಕ, ಸಂಜಯ ಪಂಡಿತ, ನವೀನ ನಾಯ್ಕ, ನಾಗಮ್ಮ ಮುಕ್ರಿ, ಸೀತಾ ನಾಯ್ಕ, ಭೂದೇವಿ, ದತ್ತಾತ್ರೇಯ ಭಟ್ಟ, ಪದ್ಮಾವತಿ ಮುಕ್ರಿ, ಲಕ್ಷ್ಮೀ ಮುಕ್ರಿ, ಶಾರದಾ ಮುಕ್ರಿ, ಶಾಂತಿ ಮುಕ್ರಿ ಸೇರಿದಂತೆ 100ಕ್ಕೂ ಅಧಿಕ ಜನರು ವಸತಿ ನಿಲಯದ ಎದುರು ಜಮಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next