ಬೆಂಗಳೂರು: ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಸರಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಪಾವತಿಸಲು ಪ್ಲಾಂಟರ್ಸ್ ಅಸೋಸಿಯೇಶನ್ ವಿರೋಧ ವ್ಯಕ್ತಪಡಿಸಿದೆ.
ಕನಿಷ್ಠ ವೇತನ ಕಾಯ್ದೆ ಅನ್ವಯ 399.99 ರೂ. ಪಾವತಿಸಬೇಕು ಎಂದು ಇತ್ತೀಚೆಗಷ್ಟೇ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಫಿ ಪ್ಲಾಂಟರ್ಸ್ ಅಸೋಸಿಯೇಶನ್‌ನ ನಿಯೋಗವು ಗುರುವಾರ ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಿದೆ.
ಸಕಾಲಕ್ಕೆ ಮಳೆಯಾಗದೆ ಬೆಳೆ ಕೈಕೊಡುತ್ತಿದೆ. ಕೆಲವೊಮ್ಮೆ ಮೋಡ ಮುಸುಕಿದ ವಾತಾವರಣ ಇದ್ದು, ಬಿಸಿಲು ಬಾರದೆ ಕಾಫಿ ಸೊರಗುತ್ತಿದೆ. ಕೊಯ್ಲು ಮುಂತಾದ ಸಂದರ್ಭಗಳಲ್ಲಿ ಕಾರ್ಮಿಕರು ಕೈಕೊಡುತ್ತಾರೆ. ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು, ಈಗಾಗಲೇ ಹೆಚ್ಚು ಕೂಲಿ ಕೊಡಲಾಗುತ್ತಿದೆ. ಇಷ್ಟಾದರೂ ಕೆಲವೊಮ್ಮೆ ಕಾಫಿ ಹಣ್ಣು ಬಿಡಿಸಲೂ ಕಾರ್ಮಿಕರು ಕೈಗೆ ಸಿಗುವುದಿಲ್ಲ. ಕಾಫಿ ಹಣ್ಣು ಬಿಡಿಸಲು ಪ್ರತಿ ಕೆಜಿಗೆ 4ರಿಂದ 5 ರೂ. ಕೊಡಲಾಗುತ್ತಿದೆ. ಆದರೆ ಕೆಲವು ಕಾರ್ಮಿಕರು 6 ರೂ.ವರೆಗೆ ಕೇಳುತ್ತಿದ್ದಾರೆ. ಕೂಲಿ ಕೆಲಸಕ್ಕಾಗಿ ಬೇರೆ ರಾಜ್ಯದವರ ಮೇಲೆ ಅವಲಂಬಿತರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ಸರಕಾರ ಹೆಚ್ಚು ಕೂಲಿ ಕೊಡುವಂತೆ ಅಧಿಸೂಚನೆ ಹೊರಡಿಸಿದ್ದು, ಈ ಪ್ರಮಾಣದಲ್ಲಿ ಪಾವತಿಸುವುದು ಕಷ್ಟವಾಗುತ್ತದೆ ಎಂದಿದ್ದಾರೆ.
ಸಭೆಯಲ್ಲಿದ್ದ ಕೂಲಿ ಕಾರ್ಮಿಕರ ಒಕ್ಕೂಟದ ಪ್ರತಿನಿಧಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ 1.20 ಲಕ್ಷ ಕಾರ್ಮಿಕರಿದ್ದೇವೆ. ಕಾರ್ಮಿಕ ಇಲಾಖೆಯ ದಾಖಲೆಗಳ ಪ್ರಕಾರವೇ 15 ಸಾವಿರ ಕಾರ್ಮಿಕರಿಗೆ ಮಾತ್ರ ಸೌಲಭ್ಯಗಳು ಸಿಗುತ್ತಿವೆ. ಉಳಿದ ಕಾರ್ಮಿಕರಿಗೆ ಕನಿಷ್ಠ ವೇತನವಾಗಲೀ, ಇಎಸ್‌ಐ ಸೌಲಭ್ಯವನ್ನಾಗಲೀ, ಆರೋಗ್ಯ ಕಾರ್ಡ್, ಬೋನಸ್, ಪಿಎಫ್ ಮತ್ತಿತರ ಯಾವ ಸವಲತ್ತುಗಳನ್ನೂ ಕೊಡುತ್ತಿಲ್ಲ ಎಂದು ಗಮನಕ್ಕೆ ತಂದಿದ್ದಾರೆ.
ಸಚಿವ ಸಂತೋಷ್ ಲಾಡ್ ಮಧ್ಯಪ್ರವೇಶಿಸಿ, ಬೆಳೆಗಾರರಿಗೆ ಕಷ್ಟ ಇರುವಂತೆ ಕಾರ್ಮಿಕರಿಗೂ ಕಷ್ಟನಷ್ಟಗಳಿರುತ್ತವೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಸರಕಾರ ಈ ಮೊತ್ತವನ್ನು ನಿಗದಿಪಡಿಸಿದೆ. ಸಾಲದ್ದಕ್ಕೆ ಕಾರ್ಮಿಕ ಕಾಯ್ದೆ ಪ್ರಕಾರ ಇಎಸ್‌ಐ, ಪಿಎಫ್ ಮುಂತಾದ ಸೌಲಭ್ಯ ನೀಡದಿರುವ ಬಗ್ಗೆಯೂ ದೂರುಗಳಿವೆ. ಮುಂದಿನ ಸಭೆ ವೇಳೆಗೆ ದೂರುಗಳು ಬಾರದಂತೆ ಕ್ರಮ ವಹಿಸಿ ಎಂದು ತಾಕೀತು ಮಾಡಿದರು.
ಕಾಫಿ ಬೆಳೆಗಾರರೂ ಆಗಿರುವ ಮೇಲ್ಮನೆ ಮಾಜಿ ಸಚಿವ ಬಿ.ಎಲ್. ಶಂಕರ್ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.