ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಉದ್ದೇಶಿತ ವಾಣಿಜ್ಯ ಬಂದರಿನ ರಸ್ತೆ ಕಾಮಗಾರಿ ಮೀನುಗಾರರ ತೀವ್ರ ವಿರೋಧದ ಮಧ್ಯೆ ಭಾರೀ ಪೊಲೀಸ್ ಬಂದೋಬಸ್ತ್ನಲ್ಲಿ ಶನಿವಾರ ಪುನಃ ಆರಂಭಗೊಂಡಿದೆ.
ಮೀನುಗಾರಿಕಾ ಬಂದರಿಗೆ ಹೊಂದಿಕೊಂಡ ಸ್ಥಳದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡುವುದರಿಂದ ಮೀನುಗಾರಿಕೆ ಮತ್ತು ಅದನ್ನೇ ನಂಬಿ ಬದುಕುವವರ ಹಿತಾಸಕ್ತಿಗೆ ಹಾನಿಯಾಗಲಿದೆ ಎಂದು ಆರೋಪಿಸಿ ಮೀನುಗಾರರು ಪ್ರತಿಭಟನೆ ನಡೆಸಿದರು.
ವಾಣಿಜ್ಯ ಬಂದರು ರಸ್ತೆ ನಿರ್ಮಾಣ ಕಾಮಗಾರಿ ಮತ್ತೆ ಆರಂಭಿಸುವ ಸೂಚನೆ ದೊರೆತ ತಕ್ಷಣ ಸ್ಥಳದಲ್ಲಿ ಜಮಾಯಿಸಿದ ಮೀನುಗಾರರು ಇದಕ್ಕೆ ಪ್ರತಿರೋಧ ಒಡ್ಡಿದರು. ವಾಣಿಜ್ಯ ಬಂದರು ಯೋಜನೆಗೆ ತಡೆ ಕೋರಿ ನ್ಯಾಯಾಲಯದ ಮೊರೆ ಹೋಗಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಾಮಗಾರಿ ನಡೆಸದಂತೆ ಪಟ್ಟು ಹಿಡಿದರು. ಕೊರೊನಾ ವೀಕೆಂಡ್ ಕರ್ಫ್ಯೂ ಇದ್ದರೂ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ತಪ್ಪು. ಇಲ್ಲಿ ರಸ್ತೆ ಕಾಮಗಾರಿ ನಡೆಸಬಾರದು ಎಂದು ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿದರು. ಮೀನುಗಾರರ ಪ್ರತಿಭಟನೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿ ಬಂದೋಬಸ್ತ್ ಕೈಗೊಂಡರು.
ವಾಗ್ವಾದ-ನೂಕಾಟ: ಮೀನುಗಾರರ ವಿರೋಧದ ಮಧ್ಯೆಯೂ ಕಾಮಗಾರಿ ನಡೆಸಲು ಮುಂದಾದಾಗ ವಾಗ್ವಾದ-ನೂಕಾಟ ನಡೆಯಿತು. ಕಾಮಗಾರಿ ನಡೆಸಲು ಇದು ಸೂಕ್ತ ಸಮಯವಲ್ಲ. ಒಂದೇ ಸ್ಥಳದಲ್ಲಿ ಇಷ್ಟೊಂದು ಜನ, ಪೊಲೀಸರು ಎಲ್ಲ ಸೇರಿರುವುದು ಕೊರೊನಾ ಹರಡಲು ಕಾರಣವಾಗಲಿದೆ. ತಕ್ಷಣ ಕಾಮಗಾರಿ ನಿಲ್ಲಿಸಿ ಎಂದು ಒತ್ತಾಯಿಸಿ ಕಾಮಗಾರಿಗೆ ಅಡ್ಡಿಪಡಿಸಿದರು. ಈ ವೇಳೆ ಪುರುಷ ಮತ್ತು ಮಹಿಳಾ ಮೀನುಗಾರರು ಹಾಗೂ ಪೊಲೀಸರ ಮಧ್ಯೆ ನೂಕಾಟ, ಗದ್ದಲ ಉಂಟಾಗಿ ಪರಿಸ್ಥಿತಿ ಬಿಗಡಾಯಿಸಿತು. ಈ ಮಧ್ಯೆ ತಮ್ಮ ಮಂಗಲಸೂತ್ರ ಹೋಯಿತೆಂದು ಕೆಲ ಮಹಿಳೆಯರು ಆರೋಪಿಸಿದರು.
ಕಾಮಗಾರಿ ನಿಲ್ಲದಿದ್ದರೆ ಸಮುದ್ರಕ್ಕೆ ಹಾರಿ ಪ್ರಾಣ ಬಿಡುವುದಾಗಿ ಕೆಲವರು ನೀರಿಗಿಳಿದಾಗ ಕರಾವಳಿ ಕಾವಲು ಪಡೆ ಪೊಲೀಸರು ಅವರನ್ನೆಲ್ಲ ಎಳೆದು ದಡಕ್ಕೆ ವಾಪಸ್ ಕರೆತಂದರು. ಪ್ರತಿಭಟನೆ ಉದ್ವಿಗ್ನ ಸ್ಥಿತಿ ತಲುಪಿ ಕೈ-ಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ನಿಷೇಧಾಜ್ಞೆ ಜಾರಿಗೊಳಿಸಿ ಕಾಮಗಾರಿ ಆರಂಭಿಸಲಾಯಿತು. ಆದರೂ ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಯಿತು.
ಮಾತುಕತೆ: ಕಾಮಗಾರಿ ವಿರೋಧಿಸಿ ಮಿನಿವಿಧಾನಸೌಧದಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮೀನುಗಾರ ಮುಖಂಡರು ಮಾತುಕತೆಗೆ ಮುಂದಾದರು. ಒಂದು ವಾರ ಕೆಲಸಕ್ಕೆ ತಡೆ ನೀಡುವಂತೆ ಮೀನುಗಾರರು ವಿನಂತಿಸಿದರು. ಇಲ್ಲವಾದರೆ ದಯಾಮರಣಕ್ಕೆ ಪರವಾನಗಿ ಕೊಡಿ ಎಂದು ಅರ್ಜಿ ಸಲ್ಲಿಸಿದರು. ಕಾಮಗಾರಿಗೆ ತಡೆಯಾಜ್ಞೆ ನೀಡುವ ಅಧಿಕಾರ ತಮಗಿಲ್ಲ ಎಂದ ಉಪವಿಭಾಗಾಧಿಕಾರಿಗಳು, ಒಂದು ವಾರದಲ್ಲಿ ಡಿಸಿ ಸಭೆ ನಡೆಸುತ್ತಾರೆ ಎಂದು ಹೇಳಿದರು.
ಈ ವೇಳೆ ಮೀನುಗಾರ ಮುಖಂಡ ರಾಜು ತಾಂಡೇಲ ಮಾತನಾಡಿ, ಬಂದರು ನಿರ್ಮಾಣದಿಂದ ಮೀನುಗಾರರಿಗೆ ಯಾವ ತೊಂದರೆಯಿಲ್ಲ ಎಂದು ಲಿಖೀತ ಭರವಸೆ ಕೊಟ್ಟರೆ ಹೋರಾಟ ನಡೆಸುವುದಿಲ್ಲ. ಆದರೆ ಹೋರಾಟ ಹತ್ತಿಕ್ಕಲು ಮುಂದಾದರೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಸಿದರು. ಮೀನುಗಾರ ಮುಖಂಡರಾದ ಚಂದ್ರಕಾಂತ ಕೊಚರೇಕರ್, ರಾಜೇಶ ತಾಂಡೇಲ, ಜಗ್ಗು ತಾಂಡೇಲ, ವೀವನ್ ಫರ್ನಾಂಡಿಸ್, ಬಾಷಾ ಪಟೇಲ್, ಅಜಿತ್ ತಾಂಡೇಲ ಮೊದಲಾದವರು ಹಾಜರಿದ್ದರು.