Advertisement

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ

05:58 AM May 23, 2020 | Suhan S |

ವಿಜಯಪುರ: ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ ವಿರೋಧಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖ ಭಗವಾನರೆಡ್ಡಿ, ಈಗಿರುವ ಎಪಿಎಂಸಿ ಕಾಯ್ದೆಗೆ ಎಪಿಎಲ್‌ಎಂ-2017 ಕಾಯ್ದೆ ಮೂಲಕ ತಿದ್ದುಪಡಿ ಮಾಡಲಾಗಿದೆ. ಸುಗ್ರೀವಾಜ್ಞೆ ಮೂಲಕ ಈ ತಿದ್ದುಪಡಿ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿರುವುದು ರೈತ ವಿರೋಧಿ ಕೃತ್ಯವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿ ರೈತರು ಹಾಗೂ ಕೃಷಿ ಕಾರ್ಮಿಕರನ್ನು ವಂಚಿಸುವ ಹೂನ್ನಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ರೈತರು ಬೆಳೆಗಳನ್ನು ಮಾರಲಾಗದೇ ನಷ್ಟ ಅನುಭವಿಸುತ್ತಿದ್ದಾರೆ. ಎಪಿಎಂಸಿ ಕಾಯ್ದೆಯ ಕಲಂಗಳಿಗೆ ತಿದ್ದುಪಡಿ ಮಾಡಿ ಜಾರಿಗೆ ತಂದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಂಪೂರ್ಣ ಕಾರ್ಪೋರೇಟ್‌ ಕೈಗೆ ಸಿಲುಕಿ, ರೈತರ ಶೋಷಣೆ ಮಿತಿ ಮೀರಲಿದೆ ಎಂದು ದೂರಿದರು.

ಜಿಲ್ಲಾ ಸಂಚಾಲಕ ಬಾಳು ಜೆವೂರ ಮಾತನಾಡಿ, ಈ ತಿದ್ದುಪಡಿಯಿಂದ ರೈತರು ಹಾಗೂ ಗ್ರಾಹಕರ ಹಿತಾಸಕ್ತಿಗಳನ್ನೂ ಬಲಿ ಕೊಟ್ಟಿದೆ. ರೈತರಿಂದ ಚುನಾಯಿತ ಎಪಿಎಂಸಿ ಸಮಿತಿಗೆ ಬದಲಾಗಿ ನಾಮ ನಿರ್ದೇಶನ ಹೊಂದಿದವರೇ ಹೆಚ್ಚಾಗಿರುವ ಮಾರುಕಟ್ಟೆ ಸಮಿತಿಗಳನ್ನು ರಚಿಸಲು ಅವಕಾಶ ನೀಡಿರುವುದು ಪ್ರಜಾತಾಂತ್ರಿಕ ವಿರೋಧಿಯಾಗಿದೆ ಎಂದು ದೂರಿದರು. ಸಿದ್ಧಲಿಂಗ ಬಾಗೇವಾಡಿ, ಆಕಾಶ ರಾಮತಿರ್ಥ, ತಿಪ್ಪರಾಯ ಹತ್ತರಕಿ, ಎಚ್‌. ಟಿ. ಭರತಕುಮಾರ, ಪಂಪಾಪತಿ, ಪೀಟರ್‌ ಅಲೆಕ್ಸಾಂಡರ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next