Advertisement

ಜನರಿಗೆ ಬೇಡವಾದ್ದನ್ನು ಹೇರಬೇಡಿ: ಸ್ಥಳೀಯರ ಆಗ್ರಹ

01:58 AM Jan 27, 2021 | Team Udayavani |

ಮಲ್ಪೆ: ಮರೀನಾ ಯೋಜನೆಯನ್ನು ವಿರೋಧಿಸಿ ಮಲ್ಪೆ-ಪಡುಕೆರೆ ಗ್ರಾಮಸ್ಥರು ಕೈಗೊಂಡ ನಿರ್ಣಯದ ಪ್ರತಿಯನ್ನು ಮಂಗಳವಾರ ಶಾಸಕ ಶಾಸಕ ಕೆ. ರಘುಪತಿ ಭಟ್‌ ಅವರಿಗೆ ಹಸ್ತಾಂತರಿಸಿದರು. ಜನರಿಗೆ ಇಷ್ಟವಿಲ್ಲದ ಯೋಜನೆ ಯನ್ನು ಜನಪ್ರತಿನಿಧಿ ಗಳು ಹೇರಬಾರದು ಎಂದು ಇದೇ ವೇಳೆ ಆಗ್ರಹಿಸಿದರು.

Advertisement

ನಿರ್ಣಯ ಪ್ರತಿಯನ್ನು ಸ್ವೀಕರಿಸಿದಶಾಸಕರು ಮಾತನಾಡಿ, ಮರೀನಾ ಯೋಜನೆ ಮಂಜೂರಾಗಿಲ್ಲ. ಆದರೂ ಈ ಭಾಗದಲ್ಲಿ ಯಾವುದೇ ಐಷಾರಾಮಿ ಹೊಟೇಲುಗಳು, ಕ್ಲಬ್‌, ಪಬ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟುಗಳನ್ನು ತೆರೆಯುವುದಿಲ್ಲ. ಆದಕ್ಕೆ ಸಿಆರ್‌ಝಡ್‌ ಅನುಮತಿಯೂ ಸಿಗುವುದಿಲ್ಲ. ಆ ಬಗ್ಗೆ ಭೀತಿ ಬೇಡ. ಮೀನುಗಾರಿಕೆಗೆ ಸಮಸ್ಯೆಯಾಗದ ರೀತಿ ಯಲ್ಲಿ ವರದಿ ಇದ್ದರೆ ಮರೀನಾ ನಿರ್ಮಾಣದಿಂದ ಜಿಲ್ಲೆ ಮತ್ತು ರಾಜ್ಯದ ಆರ್ಥಿಕತೆಗೆ ಅನುಕೂಲವಾಗುತ್ತದೆ. ಸ್ಥಳೀಯ ಸಂಸ್ಕೃತಿ, ಮೀನುಗಾರಿಕೆಗೆ ಸಮಸ್ಯೆ ಆಗುವುದಿಲ್ಲ ಎಂದರು.

ಬದುಕು ಕಸಿಯದಿರಿ :

ಹಿರಿಯ ಮೀನುಗಾರ ರಾಮ ಕಾಂಚನ್‌ ಮಾತನಾಡಿ,  ಇಲ್ಲಿ ಮರೀನಾ ನಿರ್ಮಾಣವಾದರೆ ಸ್ಥಳೀಯರಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಮಂಗಳೂರು ವಾಣಿಜ್ಯ ಬಂದರಿನ ಸ್ಥಿತಿಯನ್ನು ವಿವರಿಸಿದ ಅವರು ಮರೀನಾದಿಂದ ಅಳಿವೆ ಭಾಗದಲ್ಲೂ ಸಮಸ್ಯೆ ಉಂಟಾಗಿ, ಬಂದರಿಗೂ ಹೊಡೆತವಾಗುವ ಸಾಧ್ಯತೆಗಳಿವೆ. ಮರೀನಾ ತಂದು ಮೀನುಗಾರರ ಬುಡಕ್ಕೆ ಕೊಡಲಿ ಏಟು ನೀಡಿ, ನಮ್ಮ ಬದುಕನ್ನು ಕಸಿಯಬೇಡಿ, ಬೇಕಿದ್ದರೆ ಮಲ್ಪೆ ಬೀಚ್‌ನಂತೆ ಇಲ್ಲಿಯೂ ಸಾಮಾನ್ಯ ಬೀಚ್‌ ನಿರ್ಮಾಣ ಮಾಡಿ ಎಂದರು.

ನಮಗೆ ನಮ್ಮ ಹಿರಿಯರೇ ತಜ್ಞರು :

Advertisement

ಭುವನ್‌ ಕೋಟ್ಯಾನ್‌ ಮಾತನಾಡಿ, ಯಾವುದೇ ತಜ್ಞರು ಬಂದು ಪರಿಶೀಲನೆ ನಡೆಸಿ ವರದಿ ನೀಡುವ ಆಗತ್ಯವಿಲ್ಲ. ಪರಂಪರೆಯಿಂದ ಸಮುದ್ರದ ಮೀನುಗಾರಿಕೆಯಲ್ಲಿ ಸಾಕಷ್ಟು ಅನುಭವವನ್ನು ಪಡೆದ ನಮಗೆ ನಮ್ಮ ಹಿರಿಯರೇ ತಜ್ಞರು. ತತ್‌ಕ್ಷಣ ಈ ಯೋಜನೆಯನ್ನು ನಿಲ್ಲಿಸಿ ಎಂದರು. ಪ್ರತಿಕ್ರಿಯಿಸಿದ ಶಾಸಕರು ಈ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳಲಾಗದು. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ನಿಮ್ಮ ಹೇಳಿಕೆಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳ ಲಾಗುವುದು ಎಂದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು,ತಾ.ಪಂ. ಸದಸ್ಯ ರಾಜೇಂದ್ರ ಪಂದುಬೆಟ್ಟು, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ, ಹಿರಿಯರಾದ ಶಿವರಾಮ ಪುತ್ರನ್‌, ಮೀನುಗಾರ ಮುಖಂಡರು,  ಸಾವಿರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು. ಪ್ರಕಾಶ್‌ ಮಲ್ಪೆ ಪ್ರಸ್ತಾವನೆಗೈದರು.

Advertisement

Udayavani is now on Telegram. Click here to join our channel and stay updated with the latest news.

Next