ರಾಮನಗರ: ಕೋವಿಡ್ ಹಿನ್ನೆಲೆಯಲ್ಲಿ 15ನೇ ಹಣ ಕಾಸು ಯೋಜನೆಯಡಿ ಸ್ಥಳೀಯ ಸಂಸ್ಥೆಗಳು ನಾಗರಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸರ್ಕಾರದ ಆದೇಶವೇ ಇದೆ. ಆದರೆ, ರಾಮನಗರ ವಿಧಾನಸಭಾ ಕ್ಷೇತ್ರದ ಮಾಜಿ ಮತ್ತು ಹಾಲಿ ಶಾಸಕರು (ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ) ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ದೂರಿದರು.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಕೋವಿಡ್ ಹಿನ್ನೆಲೆಯಲ್ಲಿ ನಾಗರಿಕರಿಗೆ ಆಹಾರ್ ಕಿಟ್ ಸೇರಿದಂತೆ ಅಗತ್ಯ ನೆರವು ನೀಡಲು ಸರ್ಕಾರದ ಆದೇಶವಿದೆ. ಆದರೆ, ರಾಮನಗರ ವಿಧಾನಸಭಾ ಕ್ಷೇತ್ರದ ಮಾಜಿ ಮತ್ತು ಹಾಲಿ ಶಾಸಕರು ಗ್ರಾಪಂ ಪಿಡಿಒಗಳು, ಜಿಪಂ ಸಿಇಒಗೆ ಬೆದರಿಕೆ ಹಾಕಿ, 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಬಾರದೆಂದು, ಹಾಗೊಮ್ಮೆ ಬಳಸಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ.
ಆದರೆ ತಾವು ಮತ್ತು ಸಂಸದರು ಸರ್ಕಾರದ ಆದೇಶವನ್ನು ಅಧಿಕಾರಿಗಳಿಗೆ ತೋರಿಸಿ ಅಗತ್ಯ ನೆರವನ್ನು ಕೊಡಿಸಿದ್ದಾಗಿ ತಿಳಿಸಿದರು. ಕೋವಿಡ್‌ನಲ್ಲೂ ಕಾಂಗ್ರೆಸ್ ಸೇವೆ: ಮೊದಲನೆ ಅಲೆಯ ವೇಳೆ ಕಾಂಗ್ರೆಸ್ ನಾಗರಿಕರಿಗೆ ತನ್ನ ಸಹಾಯ ಹಸ್ತವನ್ನು ಚಾಚಿತ್ತು. ಆರೋಗ್ಯ ಸೇವೆ ಕಾರ್ಯಕ್ರಮದಡಿ ಜನರ ಆರೋಗ್ಯ ಕಲೆ ಹಾಕಲಾಗಿತ್ತು. ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು ನೀಡಲಾಗಿತ್ತು. ರೈತರಿಂದ ತರಕಾರಿ ಖರೀದಿಸಿ, ನಾಗರಿಕರಿಗೆ ಉಚಿತವಾಗಿ ವಿತರಿಸಲಾಗಿತ್ತು. ಎರಡನೇ ಅಲೆಯ ವೇಳೆ ಸೋಂಕಿತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಮೆಡಿಕಲ್ ಕಿಟ್ ವಿತರಿಸಿದ್ದಾರೆ. ಅಲ್ಲದೆ, ಚಿಕಿತ್ಸೆಗಾಗಿ ಬೆಡ್, ಆಕ್ಸಿಜನ್ ಹೀಗೆ ಅಗತ್ಯ ನೆರವು ನೀಡಲಾಗಿದೆ ಎಂದು ವಿವರಿಸಿದರು.
ಕೇಂದ್ರದ ವಿರುದ್ಧ ಕಿಡಿ: ಕೇಂದ್ರದಲ್ಲಿ ಕಳೆದ 7 ವರ್ಷದಿಂದ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ, ಜನರಿಗೆ ಸ್ಪಂದಿಸಿದ್ದು ಕಡಿಮೆ. ಮೊದಲನೆ ಅಲೆ ತಗ್ಗಿದ ನಂತರ ತಜ್ಞರು 2ನೇ ಅಲೆಯ ಬಗ್ಗೆ 2021ರ ಜನವರಿಯಲ್ಲೇ ಎಚ್ಚರಿಸಿದ್ದರು. ಆದರೆ, ಕೇಂದ್ರ ಸರ್ಕಾರ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದೆ ಎರಡನೇ ಅಲೆಯ ಈ ಪ್ರಮಾಣದ ಭೀಕರತೆಗೆ ಕಾರಣವಾಗಿದೆ ಎಂದು ದೂರಿದರು.
ನಾಗರಿಕರಿಗೆ ಬೆಲೆ ಏರಿಕೆ ಬಿಸಿ: ತಾಪಂ ಮಾಜಿ ಅಧ್ಯಕ್ಷ ಕಾಂತರಾಜ ಪಟೇಲ್ ಮಾತನಾಡಿ. ಪೆಟ್ರೋಲ್-ಡೀಸಲ್ ಬೆಲೆಗಳು ಲೀಟರ್‌ಗೆ 100ರ ಗಡಿಯಲ್ಲಿವೆ. ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 150 ರೂ. ದಾಟಿದೆ. ಲಾಕ್‌ಡೌನ್ ಕಾರಣ ಜನರ ಆದಾಯ ಕುಸಿದಿದೆ. ಆದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿತಡೆಯಲಾಗುತ್ತಿಲ್ಲ. ಜನರ ಬವಣೆ ಸರ್ಕಾರಗಳಿಗೆ ಕಾಣುತ್ತಿಲ್ಲ. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿಯವರು ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಹೆಚ್ಚಿನ ಹೊಣೆ ಹೊರಬೇಕಿತ್ತು ಎಂದು ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಲೋಹಿತ್ ಬಾಬು, ಸಾಮಾಜಿಕ ಜಾಲತಾಣ ವಿಭಾಗದ ಶ್ರೀನಿ ವಾಸ್, ಪ್ರಮುಖರಾದ ಜಗದೀಶ್, ನರಸಿಂಹ ಮೂರ್ತಿ, ವಾಸಿಂ, ಆರಿಫ್ ಉಪಸ್ಥಿತರಿದ್ದರು
ಮಾಧ್ಯಮಗಳ ಕಾಳಜಿಗೆ ಶ್ಲಾಘನೆ :
ಕೋವಿಡ್ ಭೀಕರತೆಯ ಬಗ್ಗೆ ಜನ ಸಾಮಾನ್ಯರನ್ನು ಮಾಧ್ಯಮಗಳು ಜಾಗೃತಿ ಮೂಡಿಸಿವೆಯಲ್ಲದೆ, ಕಾಲಕಾಲಕ್ಕೆ ಎಚ್ಚರಿಕೆಯ ಸಂದೇಶಗಳನ್ನು ರವಾನಿಸಿದೆ. ತಜ್ಞರ ಮೂಲಕ ಜನ ಸಾಮಾನ್ಯರಲ್ಲಿದ್ದ ಅನುಮಾನಗಳನ್ನು ಪರಿಹಾರ ನೀಡಿವೆ. ಮಾಧ್ಯಮ ಪ್ರತಿನಿಧಿಗಳು ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಜನರಿಗೆ ದಿನನಿತ್ಯದ ಆಗುಹೋಗುಗಳ ಬಗ್ಗೆ ವರದಿ ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ.ರಾಜು ಶ್ಲಾಘಿಸಿದರು