Advertisement

ಗೋಮಾಳ ಖಾಸಗಿ ಸಂಸ್ಥೆಗಳಿಗೆ ನೀಡುವುದಕ್ಕೆ ವಿರೋಧ

06:26 PM Feb 03, 2022 | Team Udayavani |

ಅಂಕೋಲಾ: ಗೋಮಾಳ-ಗೈರಾಣು ಮುಂತಾದ ಜಮೀನುಗಳನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ರಾಜ್ಯ ಸರಕಾರದ ಪ್ರಸ್ತಾಪಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಕರ್ನಾಟಕ ರಾಜ್ಯ ಸರಕಾರವು ಗೋಮಾಳ, ಗೈರಾಣು, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಮುಂತಾದ ಜಮೀನುಗಳನ್ನು ಅದರಲ್ಲಿ ಹಾಲಿ ಸಾಗುವಳಿ ನಿರತ ಬಡ ರೈತ ಹಾಗೂ ಕೃಷಿ ಕೂಲಿಕಾರರು ಮತ್ತು ಕಸುಬುದಾರರನ್ನು ಒಕ್ಕಲೆಬ್ಬಿಸಿ ಖಾಸಗಿ ಸಂಸ್ಥೆಗಳಿಗೆ ನೀಡುವ ದುರುದ್ದೇಶದಿಂದ ಒಂದು ನೀತಿ ರೂಪಿಸಲು ಸಚಿವರ ಉಪ ಸಮಿತಿ ರಚಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಮನವಿಯಲ್ಲಿ ಬಲವಾಗಿ ಖಂಡಿಸಿದೆ.

ಈ ಬಡ ರೈತರು, ಕೃಷಿಕೂಲಿಕಾರರು, ಇಂತಹ ದಶ ಲಕ್ಷಾಂತರ ಎಕರೆ ಪ್ರದೇಶಗಳನ್ನು, ತಮ್ಮ ಸ್ವಂತ ಕುಟುಂಬದ ಶ್ರಮ ಮತ್ತು ದುಬಾರಿ ಬಡ್ಡಿ ಸಾಲದ ಬಂಡವಾಳದಿಂದ ಅಭಿವೃದ್ಧಿಪಡಿಸಿ ಫಲವತ್ತಾದ ಕೃಷಿ ಯೋಗ್ಯ ಜಮೀನುಗಳನ್ನಾಗಿಸಿದ್ದಾರೆ. ಅವುಗಳಲ್ಲಿ ದಶ ಲಕ್ಷಾಂತರ ಟನ್‌ ಗಳಷ್ಟು ಬೆಳೆಯನ್ನು ಬೆಳೆದು ರಾಜ್ಯದ ಆಹಾರದ ಭದ್ರತೆಗೆ ಹಾಗೂ ಆಂತರಿಕ ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ಕಾರಣೀಭೂತರಾಗಿದ್ದಾರೆ.

ಇಂತಹ ಬಹುತೇಕ ರೈತರು ಈಗಾಗಲೇ ಹಕ್ಕು ಪತ್ರಕ್ಕಾಗಿ ಕರ್ನಾಟಕ ಸರಕಾರದ ಕರೆಯಂತೆ ಫಾರ್ಮ್- 57 ಭರ್ತಿ ಮಾಡಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಇನ್ನು ಹಲವರು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಬಡವರನ್ನು ವಂಚಿಸಿ ಕಾರ್ಪೊರೇಟ್‌ ಕಂಪನಿಗಳಿಗೆ ವಹಿಸಿಕೊಡುವ ದುರ್ನಡೆಯಾಗಿದೆ. ಆದ್ದರಿಂದ ರಾಜ್ಯ ಸರಕಾರ ತಕ್ಷಣವೇ ಬಡವರು ಅಭಿವೃದ್ಧಿ ಪಡಿಸಿದ ಈ ಜಮೀನುಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಕ್ರಮವನ್ನು ಈ ಕೂಡಲೇ ನಿಲ್ಲಿಸಬೇಕು. ಅಂತಹ ಬಡವರ ವಿರೋಧಿ ಹಾಗೂ ಲೂಟಿಕೋರ ಕಾರ್ಪೊರೇಟ್‌ ನೀತಿಗಾಗಿ ರಚಿಸಲಾದ ಸಚಿವರ ಉಪ ಸಮಿತಿಯನ್ನು ರದ್ದು ಪಡಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ.

Advertisement

ಅದೇ ರೀತಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿ, ನಗರ ಹಾಗೂ ಗ್ರಾಮಿಣ ಪ್ರದೇಶದ ಫಾರ್ಮ್- 57 ಸಲ್ಲಿಸದ ಎಲ್ಲ ಬಡ ಸಾಗುವಳಿದಾರರಿಗೆ ಹೊಸದಾಗಿ ಅರ್ಜಿ ಹಾಕಿಕೊಳ್ಳಲು ಅವಕಾಶ ನೀಡಬೇಕು. ಈಗಾಗಲೇ ಸಲ್ಲಿಸಲಾದ ಅರ್ಜಿಗಳ ವಿಲೇವಾರಿಗಾಗಿ ಭೂ ಮಂಜೂರಾತಿ ಸಮಿತಿಗಳನ್ನು ರಾಜ್ಯದಾದ್ಯಂತ ನೇಮಕ ಮಾಡಬೇಕು ಹಾಗೂ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ತಹಶೀಲ್ದಾರ್‌ ಉದಯ ಕುಂಬಾರ ಮನವಿ ಸ್ವೀಕರಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ತಾಲೂಕು ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಸಹಕಾರ್ಯದರ್ಶಿ ಉದಯ ನಾಯ್ಕ, ಸದಸ್ಯ ಶೇಖ್‌ ಇಸೂಬ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next