ಹುಣಸೂರು: ಬಿಜೆಪಿ ಎಂದಿಗೂ ದಲಿತರಿಗೆ ಆದ್ಯತೆ ನೀಡಲ್ಲ. ಆರು ಬಾರಿ ಸಂಸದರಾಗಿರುವ ವಿ.ಶ್ರೀನಿವಾಸಪ್ರಸಾದ್, ರಮೇಶ್‌ಜಿಗಜಿಣಗಿ ಹಾಗೂ ರಾಜ್ಯದಲ್ಲಿ ಪಕ್ಷೇತರರೊಬ್ಬರನ್ನು ಹೊರತುಪಡಿಸಿ ದಲಿತ ಶಾಸಕರನ್ನು ಮಂತ್ರಿ ಮಾಡಲಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ದೂರಿದರು.
ನಗರದ ಸಲೀಂ ಪ್ಯಾಲೆಸ್‌ನಲ್ಲಿ ಆಯೋಜಿಸಿದ್ದ ದಲಿತ ಸಮುದಾಯದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ದಲಿತರಿಗೆ ಕಾಂಗ್ರೆಸ್ ಹೆಚ್ಚಿನ ಆದ್ಯತೆ ನೀಡಿತ್ತು. ಸಾಕಷ್ಟು ಕಾರ್ಯಕ್ರಮ ರೂಪಿಸಿತ್ತು. ಬಿಎಸ್‌ಪಿ ಇಂದಿನ ಯುವಕರಲ್ಲಿ ಕಾಂಗ್ರೆಸ್ ವಿರೋಧಿ ಭಾವನೆ ಮೂಡಿಸಿ, ದಲಿತರ ಮತಗಳನ್ನು ಒಡೆಯುತ್ತಿದೆ. ಈ ಬಗ್ಗೆ ಯುವಕರು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಮಂತ್ರಿ ಪ್ರಿಯಾಂಕ ಖರ್ಗೆ, ಮತದಾರರು ಆಶೀರ್ವದಿಸಿದ್ದ ಅನರ್ಹ ಶಾಸಕರು ಜನರ ಆಶೀರ್ವಾದವನ್ನೇ ಮಾರಾಟ ಮಾಡಿಕೊಂಡು, ಸಂವಿಧಾನ, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಮತ್ತೆ ಆಶೀರ್ವಾದ ಕೇಳುವುದು ನಾಚಿಕೆಗೇಡು ಎಂದು ಕಿಡಿಕಾರಿದರು.
ಉಪಚುನಾವಣೆಯ ಉಸ್ತುವಾರಿ, ಮಾಜಿಮಂತ್ರಿ ಎಚ್.ಸಿ.ಮಹದೇವಪ್ಪ ಮಾತನಾಡಿ, ಯಾವ ಪಕ್ಷಕ್ಕೂ ಬಹುಮತ ಬಾರದಂತೆ ಆಶಿಸುವ ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದು, ಇಲ್ಲಿನ ಅಭ್ಯರ್ಥಿಯಾಗಿರುವ ಮಂಜುನಾಥ್ ಒಳ್ಳೆ ಆಡಳಿತಗಾರನಾಗಿದ್ದು, ಅವರನ್ನು ಬೆಂಬಲಿಸಬೇಕು. “ಮತ ಸಂತೆ ಪುಸ್ತಕ’ ಬರೆದಿದ್ದ ವಿಶ್ವನಾಥ್ ಅವರೇ ಬಾಲಿಶ ರಾಜಕಾರಣ ಮಾಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಕ್ಷೇತ್ರದ ಎಲ್ಲರನ್ನು ಸಮಾನವಾಗಿ ಕಂಡಿದ್ದೇನೆ. ಮನೆಮಗನೆಂದು ತಮ್ಮನ್ನು ಬೆಂಬಲಿಸಿರಿ, ಸದಾ ನಿಮ್ಮ ಕಷ್ಟ-ಸುಖಗಳಿಗೆ ಭಾಗಿಯಾಗುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ವಿಚಾರಗಳು ಹರಡುತ್ತಿದ್ದು, ಯಾರೂ ಕಿವಿಗೊಡಬಾರದು ಎಂದು ಕೋರಿದರು.
ಸಭೆಯಲ್ಲಿ ಮಾಜಿ ಶಾಸಕ ನರೇಂದ್ರಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಜಿಲ್ಲಾಧ್ಯಕ್ಷ ಡಾ.ವಿಜಯಕುಮಾರ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ನಾರಾಯಣ್ ಮಾತನಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮತಿ, ತಾಪಂ ಅಧ್ಯಕ್ಷೆ ಪದ್ಮಮ್ಮ, ಬಿಳಿಕೆರೆ ಬಸವರಾಜು, ಸ್ವಾಮಿ, ಕುಮಾರ್ ಇತರರಿದ್ದರು.