ಪಿರಿಯಾಪಟ್ಟಣ: ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ಹಿಂಗಾರು ಹಂಗಾಮಿನ ರಾಗಿ ಖರೀದಿಗೆ ಕಡೆಗೂ ರಾಜ್ಯ ಸರ್ಕಾರ ಆದೇಶ ನೀಡಿದೆ.
ಖರೀದಿ ಕೇಂದ್ರಗಳಲ್ಲಿ ಮುಂಗಾರು ರಾಗಿ ಖರೀದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹಿಂಗಾರು ಬೆಳೆಯಾಗಿ ರಾಗಿ ಬೆಳೆದ ರೈತರಿಗೆ ನೋಂದಣಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಪಿರಿಯಾಪಟ್ಟಣ ತಾಲೂಕು ಸೇರಿದಂತೆ ಜಿಲ್ಲೆಯ ಲಕ್ಷಾಂತರ ರೈತರಿಗೆ ಅನ್ಯಾಯ ವಾಗಿತ್ತು. ಸರ್ಕಾರದ ನಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಪಿರಿಯಾಪಟ್ಟಣ ಸೇರಿದಂತೆ ಮೈಸೂರು ಜಿಲ್ಲೆಯ ಕೆ.ಆರ್.ನಗರ, ಹುಣಸೂರು, ಎಚ್ .ಡಿ.ಕೋಟೆ, ತಿ.ನರಸೀಪುರ, ನಂಜನಗೂಡು ತಾಲೂಕುಗಳಲ್ಲಿ ರೈತರು ಹಿಂಗಾರು ಹಂಗಾಮಿನಲ್ಲಿ ರಾಗಿ ಬೆಳೆದಿದ್ದರು. ಆದರೆ, ಈ ಹಿಂಗಾರು ರಾಗಿ ಖರೀದಿಗೆ ಅವಕಾಶ ಇಲ್ಲದ ಕಾರಣ ರೈತರು ಕಂಗಾಲಾಗಿದ್ದರು. ಈ ಕುರಿತು ಉದಯವಾಣಿಯಲ್ಲಿ ಫೆ.20ರಂದು “ರಾಗಿ ಕೇಂದ್ರ ತೆರೆದರೂ ಹಿಂಗಾರು ರೈತರಿಗಿಲ್ಲ ಅನುಕೂಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಮರು ದಿನ ಅಂದರೆ ಫೆ.21ರಂದು ಪಿರಿಯಾಪಟ್ಟಣಕ್ಕೆ ಆಗಮಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ವರದಿಯನ್ನು ಪ್ರಸ್ತಾಪಿಸಿ, ಹಿಂಗಾರು ರಾಗಿ ಖರೀದಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೊತೆ ಚರ್ಚಿಸಿ, ಎಲ್ಲ ರೈತರಿಗೂ ಅವಕಾಶ ಮಾಡಿ ಕೊಡಲಾಗುವುದು ಎಂದಿದ್ದರು. ಅಲ್ಲದೇ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ತಂಬಾಕು, ಶುಂಠಿ ಹಾಗೂ ಮೆಕ್ಕೆಜೋಳಕ್ಕೂ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು.
ಈ ಬೆನ್ನಲ್ಲೇ ಫೆ.25ರಂದು ರಾಗಿ ಖರೀದಿ ಕೇಂದ್ರಗಳಲ್ಲಿ ಹಿಂಗಾರು ಹಂಗಾಮಿನ ರಾಗಿ ಖರೀದಿಗೂ ಸರ್ಕಾರ ಅವಕಾಶ ಕಲ್ಪಿಸಿದೆ. ಇದರಿಂದ ತಾಲೂಕಿನ ರೈತರಲ್ಲಿ ಮಂದಹಾಸ ಮೂಡಿದ್ದು, ಟ್ರ್ಯಾಕ್ಟರ್‌ಗಳ ಮೂಲಕ ರಾಗಿ ಮೂಟೆಗಳನ್ನು ಖರೀದಿ ಕೇಂದ್ರಗಳಿಗೆ ತರುತ್ತಿದ್ದಾರೆ .