Advertisement

ವಸತಿ ರಹಿತರಿಗೆ ಅರ್ಜಿ ಸಲ್ಲಿಸಲು ಅವಕಾಶ;ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ತೆರೆಯಿತು ಆಪ್ಶನ್‌!

12:44 AM Mar 14, 2022 | Team Udayavani |

ಪುತ್ತೂರು: ನಾಲ್ಕು ವರ್ಷಗಳ ಬಳಿಕ ವಸತಿ ಯೋಜನೆಗಳಡಿ ಹೊಸದಾಗಿ ಅರ್ಜಿ ಸಲ್ಲಿಸಲು ರಾಜೀವ್‌ ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಅವಕಾಶ ತೆರೆದುಕೊಂಡಿದೆ.

Advertisement

ಅರ್ಹರು ಗ್ರಾಮ ಪಂಚಾಯತ್‌ಗೆ ತೆರಳಿ ಅಗತ್ಯ ದಾಖಲೆ ಸಲ್ಲಿಸಿ ವಸತಿ ರಹಿತರ ಪಟ್ಟಿಯಲ್ಲಿ ಸೇರ್ಪಡೆ ಗೊಳ್ಳಬಹುದು. ಈ ಬಗ್ಗೆ ಗ್ರಾ.ಪಂ.ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

ಏನಿದು ವೆಬ್‌ಸೈಟ್‌
ಸರಕಾರದ ವಿವಿಧ ವಸತಿ ಯೋಜನೆಗಳನ್ನು ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಮಂಜೂರು ಮಾಡಲಾಗುತ್ತದೆ. ವಸತಿ ರಹಿತರಿಂದ ಅರ್ಜಿ ಪಡೆದ ಬಳಿಕ ಗ್ರಾ.ಪಂ.ಗಳಲ್ಲಿ ನಿಗಮದ ಸೈಟ್‌ಗೆ ಅರ್ಜಿದಾರರ ಮಾಹಿತಿ ಕಳಿಸಲಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಈ ಸೈಟ್‌ನಲ್ಲಿ ಮಾಹಿತಿ ತುಂಬುವ ಅವಕಾಶವನ್ನು ಮುಚ್ಚಲಾಗಿತ್ತು. ಈ ಹಿಂದೆ ವಸತಿ ರಹಿತರು ಮತ್ತು ನಿವೇಶನ ರಹಿತರ ಸಮೀಕ್ಷೆಯಡಿ ಗುರುತಿಸಲಾದವರಿಗೆ ಸೌಲಭ್ಯ ಮಂಜೂರು ಮಾಡಿದ ಬಳಿಕವೇ ಹೊಸಬರಿಗೆ ಅವಕಾಶ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಹೊಸ ಅರ್ಜಿಗೆ ಅವಕಾಶ
ಹೆಚ್ಚಿನ ಗ್ರಾ.ಪಂ.ಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅರ್ಜಿಯನ್ನು ಸ್ವೀಕರಿಸುತ್ತಿರಲೇ ಇಲ್ಲ. ಕೆಲವೆಡೆ ಸ್ವೀಕರಿಸಿದರೂ ವೆಬ್‌ಸೈಟ್‌ಗೆ ಅಪ್‌ಲೋಡ್‌ ಆಗದೆ ಗ್ರಾ.ಪಂ.ಗಳಲ್ಲಿ ರಾಶಿ ಬಿದ್ದಿತ್ತು. ಇದೀಗ ಅಪ್‌ಲೋಡ್‌ಗೆ ಅವಕಾಶ ಸಿಕ್ಕಿದೆ.

ಈ ಹಿಂದೆ ವಸತಿ ರಹಿತರ ಪಟ್ಟಿಯಲ್ಲಿ ಸೇರ್ಪಡೆಗೊಂಡವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಈ ತನಕ ಅರ್ಜಿ ಸಲ್ಲಿಸದೆ ಇರುವವರಿಗೆ ಮಾತ್ರ ಅವಕಾಶ. ಫಲಾನುಭವಿ ಮಹಿಳೆಯಾಗಿರಬೇಕು ಜತೆಗೆ ತನ್ನ ಹೆಸರಿನಲ್ಲಿ ನಿವೇಶನ ಹೊಂದಿರುವ ದಾಖಲೆ ಹೊಂದಿರಬೇಕು. ಆದಾಯ ಮಿತಿ ವಾರ್ಷಿಕ 32 ಸಾವಿರ ರೂ. ಮೀರಬಾರದು, ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಜಾತಿ-ಆದಾಯ ಪ್ರಮಾಣ ಪತ್ರ ಕಡ್ಡಾಯ.

Advertisement

ವಸತಿ ರಹಿತರ ಪಟ್ಟಿ
2018ರಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮೀಣ) ಯಡಿ ಗ್ರಾಮೀಣ ಪ್ರದೇಶದಲ್ಲಿ ವಸತಿ, ನಿವೇಶನ ರಹಿತರ ಸಮೀಕ್ಷೆ ನಡೆಸಲಾಗಿತ್ತು. ಆಯ್ಕೆಯಾದ ಫಲಾನುಭವಿಗಳನ್ನು ವಿವಿಧ ವಸತಿ ಯೋಜನೆಗಳಡಿ ಪರಿಗಣಿಸಲಾಗಿದೆ. ಸಮೀಕ್ಷೆಯಲ್ಲಿ ಅರ್ಹರು ಬಿಟ್ಟು ಹೋಗಿದ್ದಲ್ಲಿ ವಸತಿ ಸೌಕರ್ಯ ದಿಂದ ವಂಚಿತರಾಗುವ ಸಂಭವ ವಿರುವುದರಿಂದ ಪಟ್ಟಿಯಲ್ಲಿನ ಫಲಾನುಭವಿಗಳ ಅರ್ಹತೆಗಳನ್ನು ಮರುಪರಿಶೀಲಿಸುವಂತೆ ನಿರ್ದೇಶಿಸ ಲಾಗಿತ್ತು. ಅನರ್ಹರಿದ್ದಲ್ಲಿ ಕೈ ಬಿಡುವಂತೆಯೂ ಅರ್ಹರು ಇದ್ದಲ್ಲಿ ಪಟ್ಟಿಗೆ ಸೇರಿಸಿಕೊಂಡು ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡಿ, ರಾಜ್ಯ ವಸತಿ ಯೋಜನೆಗಳಿಗೆ ಪರಿಗಣಿಸಿಕೊಳ್ಳಲು ಅನುಮತಿ ನೀಡಿ ಆದೇಶ ನೀಡಲಾಗಿತ್ತು.

ನಾಲ್ಕು ವರ್ಷದ ಹಿಂದಿನ ಸಮೀಕ್ಷೆಯಂತೆ ಉಡುಪಿ ಜಿಲ್ಲೆ ಯಲ್ಲಿ 15,750 ವಸತಿ ರಹಿತ ಮತ್ತು 32,455 ನಿವೇಶನ ರಹಿತ ಕುಟುಂಬಗಳಿವೆ. ದ.ಕ ಜಿಲ್ಲೆಯಲ್ಲಿ ಅನುಕ್ರಮವಾಗಿ 18,926 ಮತ್ತು 47,401 ಕುಟುಂಬಗಳಿವೆ.

ಹೊಸದಾಗಿ ಗುರಿ ನೀಡಲಾಗಿದ್ದು ಅದಕ್ಕನುಗುಣವಾಗಿ ಗ್ರಾ.ಪಂ.ಗಳಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿಯನ್ನು ವೆಬ್‌ಸೈಟ್‌ ಮೂಲಕ ಅಪ್‌ಲೋಡ್‌ ಮಾಡಲು ಅವಕಾಶ ನೀಡಲಾಗಿದೆ. ಅರ್ಹರು ಗ್ರಾ.ಪಂ.ನಲ್ಲಿ ಅರ್ಜಿ ಸಲ್ಲಿಸಬಹುದು.
-ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next