Advertisement

“ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಖಾಸಗಿಯವರಿಗೆ ಅವಕಾಶ’

11:17 PM Feb 27, 2021 | Team Udayavani |

ಪಡುಬಿದ್ರಿ: ಬ್ಲೂ ಫ್ಲ್ಯಾಗ್‌ ಮಾನ್ಯತೆ ಪಡೆದಿರುವ ಪಡುಬಿದ್ರಿ ಬೀಚ್‌ನ ಅಭಿವೃದ್ಧಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗಿಯವರಿಗೆ ಅವಕಾಶವನ್ನು ನೀಡಲಿದ್ದೇವೆ. ಇದರಿಂದಾಗಿ ಮುಂದೆ ಜಲಕ್ರೀಡೆ ಚಟುವಟಿಕೆಗಳಿಗೆ ಗುತ್ತಿಗೆ ಆಧಾರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಟೆಂಡರ್‌ ಪ್ರಕ್ರಿಯೆಯೊಂದಿಗೆ ನೀಡಬಹುದಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೇಶ್ವರ್‌ ಹೇಳಿದರು.

Advertisement

ಅವರು ಫೆ. 27ರಂದು ಪಡುಬಿದ್ರಿಯ ಬ್ಲೂ ಫ್ಲ್ಯಾಗ್‌ ಬೀಚ್‌ ಪ್ರದೇಶಕ್ಕೆ ಭೇಟಿಯಿತ್ತು ಮಾತನಾಡಿದರು. ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಶಾಸಕ ಲಾಲಾಜಿ ಮೆಂಡನ್‌ ಒತ್ತಾಯಿಸಿದ್ದಾರೆ. ವಾಹನ ದಟ್ಟಣೆೆಯನ್ನು ಸುಸ್ಥಿತಿಗೆ ತರಲು ಎರಡು ಸೇತುವೆಗಳ ರಚನೆ ಸಹಿತವಾಗಿ ರಸ್ತೆ ವಿಸ್ತ ರ ಣೆಗಾಗಿ 10 ಕೋಟಿ ರೂ.ಗಳ ಪ್ರಸ್ತಾವನೆಯು ಈಗಾಗಲೇ ಪ್ರವಾಸೋದ್ಯಮ ಇಲಾಖೆಯ ಬಳಿಯಿದೆ. ಇದಕ್ಕೆ ಶೀಘ್ರವಾಗಿ ಇಲಾಖಾ ಅನುಮೋದನೆಯನ್ನು ನೀಡಲಾಗುವುದೆಂದು ಸಚಿವ ಯೋಗೇಶ್ವರ್‌ ತಿಳಿಸಿದರು.

ಪರಿಸರ ನೀತಿಯನ್ನು ಕೊರೊನೋತ್ತರವಾಗಿ ಸ್ವತ್ಛತೆಯ ದೃಷ್ಟಿಯಿಂದ ಬಿಗಿಗೊಳಿಸಲಿದ್ದೇವೆ. ನಗರಸಭೆ, ಪುರಸಭಾ ವ್ಯಾಪ್ತಿಗಳಲ್ಲಿ ಘನ ತ್ಯಾಜ್ಯ, ಎಸ್‌ಟಿಪಿ ಸಂಸ್ಕರಣ ಘಟಕಗಳು ಉತ್ತಮ ರೀತಿಯಲ್ಲಿ ಕಾರ್ಯವೆಸಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದೂ ಸಚಿವ ಯೋಗೇಶ್ವರ್‌ ತಿಳಿಸಿದರು.

ಸಚಿವರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌, ಕಾಪು ಶಾಸಕ ಲಾಲಾಜಿ ಮೆಂಡನ್‌, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ ಸೋಮಶೇಖರ್‌, ಕರಾವಳಿ ಪ್ರವಾಸೋದ್ಯಮ ಸಂಸ್ಥೆ (ಆ್ಯಕ್ಟ್)ಯ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು ಮತ್ತು ಕಾರ್ಯದರ್ಶಿ ಗೌರವ್‌ ಶೇಣವ, ಬ್ಲೂ ಫ್ಲ್ಯಾಗ್‌ ಬೀಚ್‌ನ ಪ್ರಬಂಧಕ ವಿಜಯ್‌ ಶೆಟ್ಟಿ, ಅದಾನಿ ಕರ್ನಾಟಕ ಯೋಜನೆಗಳ ಅಧ್ಯಕ್ಷ ಕಿಶೋರ್‌ ಆಳ್ವ, ಯುಪಿಸಿಎಲ್‌ ಮಹಾ ಪ್ರಬಂಧಕ ಗಿರೀಶ್‌ ನಾವಡ, ಹಿರಿಯ ಪ್ರಬಂಧಕ ರವಿ ಜೀರೆ ಉಪಸ್ಥಿತರಿದ್ದರು.

ಹೆಲಿ ಟೂರಿಸಂಗೂ ಪ್ರಾಮುಖ್ಯ
ಕರ್ನಾಟಕ ಕರಾವಳಿಯಲ್ಲಿ ಪ್ರವಾಸೋದ್ಯಮ ಕಾರಿಡಾರ್‌ ಸ್ಥಾಪಿಸುವ ಬಯಕೆಯಿದೆ. ಸಿಆರ್‌ಝಡ್‌ ನಿಯಮಗಳ ಸಡಿಲಿಕೆಯೂ ಆಗಲಿದೆ. ರಾಜ್ಯದಲ್ಲಿ ಪ್ರವಾಸೋದ್ಯಮವು ಕೇರಳ, ಗೋವಾಗಳಂತೆ ಅಭಿವೃದ್ಧಿಯಾಗಿಲ್ಲ. ಕೈಗಾರಿಕಾ ಸ್ಥಾನಮಾನದೊಂದಿಗೆ ಇದನ್ನು ನಾವು ಬೆಳೆಸಬೇಕಿದೆ. ಆ ನಿಟ್ಟಿನಲ್ಲೂ ಹೊಟೇಲ್‌ ಉದ್ಯಮಗಳಿಗೂ ರಾಜ್ಯ 2020 – 25 ಪ್ರವಾಸೋದ್ಯಮ ನೀತಿಯಡಿ ಸಬ್ಸಿಡಿ ಯನ್ನು ನೀಡಲಿದೆ. ಹೆಲಿ ಟೂರಿಸಂಗೂ ಪ್ರಾಮುಖ್ಯ ದೊರೆಯಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ಬಳಿಯೂ ಈ ಕುರಿತಾಗಿ ಚರ್ಚಿಸುತ್ತೇನೆ.

Advertisement

– ಸಿ.ಪಿ.ಯೋಗೇಶ್ವರ್‌, ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next