ಬೆಂಗಳೂರು: ಲಾಕ್‌ಡೌನ್-4 ಅವಧಿಯಲ್ಲಿ ಹಸಿರು, ಹಳದಿ ವಲಯಗಳಂತೆ ಕೆಂಪು ವಲಯದಲ್ಲೂ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಬೇಕೆಂಬ ಪ್ರಮುಖ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆ ಬಳಿಕ ಮಾತನಾಡಿದ ಅವರು,”ಲಾಕ್‌ಡೌನ್-4 ಕುರಿತು ಕೇಂದ್ರ ಸರ್ಕಾರದ ಮುಂದಿನ ಸೂಚನೆಯನ್ನು ಎದುರು ನೋಡುತ್ತಿದ್ದೇವೆ. ರಾಜ್ಯದಲ್ಲಿ ಅದನ್ನು ಯಾವ ರೀತಿ ಅನುಷ್ಠಾನ ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸುತ್ತಾರೆ ಎಂದರು.
ಕಂಟೈನ್ಮೆಂಟ್ ವಲಯದಲ್ಲಿ ಮಾತ್ರ ಚಟುವಟಿಕೆ ಸ್ಥಗಿತಗೊಳಿಸಿ, ಉಳಿದ ಭಾಗಗಳಿಗೆ ವಿನಾಯಿತಿ ನೀಡಬೇಕು. ರೆಡ್ ಝೋನ್‌ನಲ್ಲೂ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಬೇಕು ಎಂಬುದೇ ನಮ್ಮ ಪ್ರಮುಖ ಬೇಡಿಕೆ,” ಎಂದು ಹೇಳಿದರು. “ಕೊರೊನಾ ಸೋಂಕು ತಡೆಗೆ ಈಗಾಗಲೇ 2 ತಿಂಗಳು ಸಮಯ ತೆಗೆದುಕೊಂಡಿದ್ದು,
ಇದೀಗ ಜನಜೀವನ ಸಹಜಸ್ಥಿತಿಗೆ ಮರಳುವ ಸಮಯ ಬಂದಿದೆ. ಆರ್ಥಿಕತೆ ಬಗ್ಗೆಯೂ ಗಮನ ಹರಿಸುವ ಅನಿವಾರ್ಯತೆ ಇರುವುದರಿಂದ ವೈರಸ್ ಹಾಗೂ ಜನ ಜೀವನದ ನಡುವೆ ಸಮತೋಲನ ಕಾಯ್ದುಕೊಂಡು ಅದರ ಜತೆಗೆ ಬದುಕಲು ಕಲಿಯಬೇಕು. ಮುಂಜಾಗ್ರತಾ ಕ್ರಮಗೊಳೊಂದಿಗೆ ಪರಿಸ್ಥಿತಿ ನಿಭಾಯಿಸಲು ಸನ್ನದರಾಗಿದ್ದೇವೆ,”ಎಂದರು.
ಬೇಡಿಕೆ ಸರಿಯಲ್ಲ: “ರಂಜಾನ್ ದಿನ ಸಾಮೂಹಿಕ ನಮಾಜ್ ಮಾಡಲು ಅವಕಾಶ ನೀಡಬೇಕು ಎಂಬ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಅವರ ಬೇಡಿಕೆ ಸರಿಯಲ್ಲ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು ಎಂದು ಸರ್ಕಾರ ನಿಶ್ಚಯಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಭಾವನಾತ್ಮಕ ವಿಚಾರ ತಂದು ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.