Advertisement
ಹೆಚ್ಚು ಸವಲತ್ತುಗಳಿರುವ ಮೊಬೈಲ್ ಫೋನ್‌ಗಳನ್ನು ಆನ್‌ಲೈನ್ ಮೂಲಕ ಕಡಿಮೆ ದರದಲ್ಲಿ ಮಾರಾಟ ಮಾಡಲು ಅವಕಾಶವಿರುವುದರಿಂದ ಅನೇಕ ಕಂಪೆನಿಗಳು ಅತ್ತ ಮುಖ ಮಾಡುತ್ತಿವೆ. ಶಿಯೋಮಿ, ಆನರ್, ರಿಯಲ್‌ಮಿ, ಮೋಟೋ ಗಳ ಯಶಸ್ವಿ ಆನ್‌ಲೈನ್ ಮಾರಾಟದಿಂದ ಚಿಂತಿತವಾದ ಸ್ಯಾಮ್‌ಸಂಗ್ ಕಳೆದ ವಾರವಷ್ಟೇ ಎಂ ಸಿರೀಸ್‌ನಲ್ಲಿ ಎರಡು ಮೊಬೈಲ್‌ಗಳನ್ನು ಅಮೆಜಾನ್ ಮೂಲಕ ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಬಿಟ್ಟಿತು. ಈಗ ಇದೇ ದಾರಿ ಅನುಸರಿಸಿ ಒಪ್ಪೋ ಕಂಪೆನಿ ಕೂಡ ತನ್ನ ಒಪ್ಪೋ ಕೆ1 ಎಂಬ ನೂತನ ಸ್ಮಾರ್ಟ್ ಫೋನ್ ಅನ್ನು ಇದೀಗ ತಾನೇ ಫ್ಲಿಪ್‌ಕಾರ್ಟ್ ಮೂಲಕ ಬಿಡುಗಡೆ ಮಾಡಿದೆ.
Related Articles
Advertisement
ಇದನ್ನು ಪರಿಚಯಿಸಲು ನಾನು ಹೊರಟಿದ್ದು ಇದರಲ್ಲಿ ದರಕ್ಕೆ ತಕ್ಕಂತೆ ಉತ್ತಮ ಅಂಶಗಳನ್ನು ನೀಡಿರುವುದರಿಂದ. ಇದರಲ್ಲಿ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಇದೆ! ಇದು ಮಧ್ಯಮ ವರ್ಗದ ಪ್ರೊಸೆಸರ್‌ಗಳಲ್ಲಿ ವೇಗದ್ದಾಗಿದೆ. 2.2 ಗಿ.ಹ. ಸಾಮರ್ಥ್ಯದ ಈ ಪ್ರೊಸೆಸರ್°ಲ್ಲಿ ಪಬ್‌ಜಿಯಂಥ ಗೇಮ್‌ಗಳನ್ನು ಸರಾಗವಾಗಿ ಆಡಬಹುದು. ಇನ್ನೊಂದು ವಿಶೇಷವೆಂದರೆ, ಪರದೆಯ ಮೇಲೇ ಫಿಂಗರ್‌ಪ್ರಿಂಟ್ ಸೆನ್ಸರ್ ನೀಡಲಾಗಿದೆ. (ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್).
ಇದು 6.4 ಇಂಚಿನ, ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. (1080*2340, 403 ಪಿಪಿಐ) ಪರದೆ ಸುಲಭವಾಗಿ ಒಡೆದು ಹೋಗದಂತೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಸಹ ಇದಕ್ಕಿದೆ. ಈಗಿನ ಫೋನ್‌ಗಳ ಸಾಮಾನ್ಯ ಟ್ರೆಂಡ್ ಆದ ವಾಟರ್ ಡ್ರಾಪ್ ಪರದೆ ಇದೆ. ಪರದೆಯ ಅನುಪಾತ ಶೇ. 91ರಷ್ಟಿದೆ, ಅಂದರೆ ಫೋನಿನ ಅಂಚುಪಟ್ಟಿ ಪ್ರದೇಶ ಶೇ. 9ರಷ್ಟು ಇದೆ. ಬ್ಯಾಟರಿ 3600 ಎಂಎಎಚ್ ಇದೆ.ಸಾಧಾರಣ ಬಳಕೆಗೆ ಒಂದು ದಿನ ಬ್ಯಾಟರಿ ಬರಲು ಅಡ್ಡಿಯಿಲ್ಲ. ಅಂಡ್ರಾಯ್ಡ 8.1 ಓರಿಯೋ, ಕಲರ್ ಓಎಸ್ ಇದೆ. ಲೋಹ ಮತ್ತು ಗಾಜಿನ ಹಿಂಬದಿಯಿರುವ ದೇಹ ಹೊಂದಿದೆ. ಎರಡು ಸಿಮ್‌ಗಳಲ್ಲೂ 4ಜಿ ವೋಲ್ಟ್ ಬಳಸಬಹುದು. ಇದರಲ್ಲಿ ಮೈಕ್ರೋ ಯುಎಸ್‌ಬಿ ಚಾರ್ಜರ್ ಇದೆ. ಫಾಸ್ಟ್ ಚಾರ್ಜರ್ ಇಲ್ಲ.
ಇದರಲ್ಲಿನ ಕೊರತೆಗಳು: ಈ ದರಕ್ಕೆ ವೇಗದ ಚಾರ್ಜರ್ ಹಾಗೂ ಯುಎಸ್‌ಬಿ ಟೈಪ್ ಸಿ ಪೋರ್ಟ್ ನೀಡಬಹುದಿತ್ತು. ಪರದೆಯ ಮೇಲೇ ಬೆರಳಚ್ಚು ಬಳಸಿ ಮೊಬೈಲ್ ತೆರೆಯುವ ಇನ್‌ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್, ವೇಗವಾಗಿ ಕೆಲಸ ಮಾಡುವುದಿಲ್ಲ. ಬ್ಯಾಟರಿ 4000 ಎಂಎಎಚ್ ಇದ್ದರೆ ಚೆನ್ನಾಗಿತ್ತು. ಮುಂಬದಿ ಕ್ಯಾಮರಾ 25 ಮೆ.ಪಿ. ಕೊಟ್ಟು, ಹಿಂಬದಿ ಕ್ಯಾಮರಾ 16 ಮೆ.ಪಿ. ಕೊಡಲಾಗಿದೆ. ಇದರ ಬದಲು ಹಿಂಬದಿ ಕ್ಯಾಮರಾ ಮೆ.ಪಿ. ಜಾಸ್ತಿ ಇದ್ದರೆ ಅನುಕೂಲ ಜಾಸ್ತಿ. ಈಗ ಎಲ್ಲ ಹೊಸ ಅಂಡ್ರಾಯ್ಡ ಫೋನ್‌ಗಳಲ್ಲಿ ಬಾಕ್ಸ್ ಜೊತೆಗೇ 9.0 ಪೈ ಓ.ಎಸ್. ನೀಡಲಾಗುತ್ತಿದೆ. ಒಪ್ಪೋ 8.1 ಇನ್ನೂ ಓರಿಯೋದಲ್ಲೇ ಇದೆ. ಆದರೂ, ಒಪ್ಪೋ ಕಂಪೆನಿ 17 ಸಾವಿರ ರೂ.ಗಳಿಗೆ ಗ್ರಾಹಕನ ಹಣಕ್ಕೆ ತಕ್ಕ ಮೌಲ್ಯ ನೀಡುವ ಮೊಬೈಲ್ ನೀಡಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯ. ಈಗ ಕೇಂದ್ರ ಸರ್ಕಾರ ಆನ್‌ಲೈನ್ ಮಾರಾಟ ಸಂಸ್ಥೆಗಳಿಗೆ ವಿಧಿಸಿರುವ ಹೊಸ ನಿಯಮದ ಪ್ರಕಾರ ಆನ್‌ಲೈನ್ ಕಂಪೆನಿಗಳು ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲುಸಿವ್, ಅಮೆಜಾನ್ ಎಕ್ಸ್‌ಕ್ಲುಸಿವ್ ಎಂದು ಹಾಕಿಕೊಳ್ಳುವಂತಿಲ್ಲ. ಹಾಗಾಗಿ ಫ್ಲಿಪ್‌ಕಾರ್ಟ್ ಒಪ್ಪೋ ಕೆ1 ಪುಟದಲ್ಲಿ, ಜಸ್ಟ್ ಹಿಯರ್ ಎಂದು ಹಾಕಿಕೊಂಡಿದೆ! ನನಗೆ ಚಾಪೆ-ರಂಗೋಲಿ ಗಾದೆ ನೆನಪಿಗೆ ಬಂತು!
– ಕೆ.ಎಸ್. ಬನಶಂಕರ ಆರಾಧ್ಯ