ಮುಂಬಯಿ: ಜಗತ್ತಿನ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾಗಿರುವ ಕ್ರಿಸ್ಟೊಫರ್ ನೋಲನ್ ಅವರ ಬಹು ನಿರೀಕ್ಷಿತ “ಓಪೆನ್ ಹೈಮರ್”ಚಿತ್ರ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಅಂದುಕೊಂಡಂತೆ ಚಿತ್ರ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ.
ನಿರ್ದೇಶಕ ಕ್ರಿಸ್ಟೊಫರ್ ನೋಲನ್ ಅವರ ಸಿನಿಮಾಗಳನ್ನು ನೋಡುವ ದೊಡ್ಡ ವರ್ಗವೇ ಇದೆ. ಅವರ ಸಿನಿಮಾಗಳು ತಲೆಗೆ ಹುಳು ಬಿಡುವುದರ ಜೊತೆ ಪ್ರೇಕ್ಷಕರನ್ನು ಎಂಗೇಜ್ ಆಗಿಡುತ್ತದೆ. ಭಾರತದಲ್ಲಿ ಕ್ರಿಸ್ಟೊಫರ್ ನೋಲನ್ ಅವರ ಸಿನಿಮಾಗಳನ್ನು ನೋಡುವವರ ಸಂಖ್ಯೆ ಕಮ್ಮಿಯೇನಿಲ್ಲ. ಅವರ ಈ ಹಿಂದಿನ ಸಿನಿಮಾಗಳಿಗೂ ಶಹಬ್ಬಾಸ್ ಎಂದಿದ್ದ ಪ್ರೇಕ್ಷಕರು “ಓಪೆನ್ ಹೈಮರ್” ಸಿನಿಮಾದ ಬಗ್ಗೆ ಹುಬ್ಬೇರಿಸುವಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಅಣುಬಾಂಬ್ ಸಂಶೋಧಿಸಿರುವ ಪರಮಾಣು ವಿಜ್ಞಾನಿ “ಓಪೆನ್ ಹೈಮರ್” ಅವರ ಕಥೆಯನ್ನು ಒಳಗೊಂಡಿರುವ ಸಿನಿಮಾವನ್ನು ದೊಡ್ಡಪರದೆಯ ಮೇಲೆ ನೋಲನ್ ಪ್ರಸೆಂಟ್ ಮಾಡಿರುವ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜಗತ್ತಿನ ಅತ್ಯಂತ ವಿನಾಶಕಾರಿ ಅಣುಬಾಂಬ್ ತಯಾರಿಕೆಯ ಪೂರ್ವ ಸಿದ್ಧತೆ ಹಾಗೂ ಆ ಬಳಿಕದ ಕೆಲ ಘಟನಾವಳಿಯನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಜು.21 ರಂದು ಸಿನಿಮಾ ತೆರೆಗ ಬಂದಿತ್ತು. ಭಾರತದಲ್ಲಿ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. “ಸ್ಯಾಕ್ನಿಲ್ಕ್” ವರದಿಯ ಪ್ರಕಾರ“ಓಪೆನ್ ಹೈಮರ್” ಎಲ್ಲಾ ಭಾಷೆಯಲ್ಲಿ ಸೇರಿ ಮೊದಲ ದಿನವೇ 13.50 ಕೋಟಿ ರೂ.ಯನ್ನು ಗಳಿಸಿದೆ. ಹಾಲಿವುಡ್ ಸಿನಿಮಾಕ್ಕೆ ಇಷ್ಟು ದೊಡ್ಡ ಮಟ್ಟದಲ್ಲಿ ಭಾರತದಲ್ಲಿ ಓಪನಿಂಗ್ ಸಿಕ್ಕಿರುವುದು ನೋಲನ್ ಅವರ ಸಿನಿಮಾಕ್ಕೆ ಸಂದ ಜಯ.
ಚಿತ್ರದಲ್ಲಿ “ಓಪೆನ್ ಹೈಮರ್” ಅವರ ಪಾತ್ರವನ್ನು ಸಿಲಿಯಾನ್ ಮರ್ಫಿ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಬರ್ಟ್ ಡೌನಿ ಜೂ, ಎಮಿಲಿ ಬ್ಲಂಟ್, ಮ್ಯಾಟ್ ಡ್ಯಾಮನ್, ರಾಮಿ ಮಾಲೆಕ್ ಮುಂತಾದವರು ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ.
ಅಂದಹಾಗೆ ಹಾಲಿವುಡ್ ನಲ್ಲಿ “’ಬಾರ್ಬಿ” ಹಾಗೂ ಕ್ರಿಸ್ಟೊಫರ್ ನೋಲನ್ ಅವರ “ಓಪೆನ್ ಹೈಮರ್” ಒಂದೇ ದಿನ ತೆರೆಕಂಡಿದೆ. ಭಾರತದಲ್ಲಿಯೂ ಇವುಗಳ ನಡುವೆಯೂ ಪೈಪೋಟಿ ಉಂಟಾಗಿದೆ.