ರಾಯಚೂರು: ವಾಡಿ-ಗದಗವರೆಗೆ ರೈಲ್ವೆ ಲೈನ್‌ಜೋಡಣೆಗಾಗಿ ಭೂ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದು, ಭೂ ಮಾಲೀಕರ ಅಭಿಪ್ರಾಯ ಸಂಗ್ರಹಿಸಿ ದರ ನಿಗದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಲಿಂಗಸುಗೂರು ತಾಲೂಕಿನ ಮುದಗಲ್ ಹೋಬಳಿ ವ್ಯಾಪ್ತಿಯ ಜಾಂತಾಪುರ ಹಾಗೂ ಆರ್.ಎ.ಬೋಗಾಪುರದಲ್ಲಿ 63 ಎಕರೆ 2 ಗುಂಟೆ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಪ್ರತಿ ಎಕರೆಗೆ ಸರ್ಕಾರ 4.69 ಲಕ್ಷ ರೂ. ನಿಗದಿಪಡಿಸಿದೆ. ಇದಕ್ಕೆ ನಿಮ್ಮ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು. ಜಾಂತಾಪುರದಲ್ಲಿ 30 ಎಕರೆ 10 ಗುಂಟೆ ಹಾಗೂ ಆರ್.ಎ ಬೋಗಾಪುರದಲ್ಲಿ 32 ಎಕರೆ 32 ಗುಂಟೆ ಭೂ ಸ್ವಾ ಧೀನ ಪಡಿಸಿಕೊಳ್ಳಲಾಗುವುದು ಎಂದು ವಿವರಿಸಿದರು.
2013ರ ಕಾಯ್ದೆ ಪ್ರಕಾರ ಬೆಲೆ ನಿಗದಿ ಮಾಡಲಾಗುತ್ತಿದೆ. ಲಿಂಗಸೂಗೂರು ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಇರುವುದರಿಂದ ನೀರಾವರಿಗೊಳಪಡುವ ಜಮೀನು ಹೆಚ್ಚಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆಗೆ ವಿಳಂಬವಾಗಿದೆ. ಆ ಭಾಗದಲ್ಲಿ ಜಮೀನು ಮಾರಾಟಕ್ಕೆ ದರ ನಿಗದಿಪಡಿಸುವುದು ಸವಾಲಿನ ಕೆಲಸ ಎಂದರು.
ಸಂತ್ರಸ್ತರಿಗೆ ರೈಲ್ವೆ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿಯಡಿ ಸರ್ಕಾರಿ ನೌಕರಿ ಸಿಗುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371 (ಜೆ) ಕಲಂತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಈ ಭಾಗದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.80 ಮೀಸಲಾತಿ ಕಲ್ಪಿಸಿದೆ. ಖಾಲಿಯಿರುವಹುದ್ದೆಗಳ ಭರ್ತಿಯಲ್ಲಿ ಸಂತ್ರಸ್ತರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಮುನ್ನ ಗೆಜೆಟ್ ಅಧಿಸೂಚನೆ ಹೊರಡಿಸಬೇಕಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಿ ವರದಿ ನೀಡಿದ ನಂತರ ದರ ನಿಗದಿಪಡಿಸಲಾಗುವುದು ಎಂದರು.
ವಿಶೇಷ ಭೂ ಸ್ವಾಧೀನ ಅಧಿಕಾರಿ ಡಾ| ಬಿ. ಶರಣಪ್ಪ ಮಾತನಾಡಿ, 63 ಎಕರೆ 2 ಗುಂಟೆ ಭೂ ಸ್ವಾಧೀನ ಪಡಿಸಿಕೊಳ್ಳಬೇಕಿದೆ. 2013ರ ಕಾಯ್ದೆ ಪ್ರಕಾರ ಉಪ ನೋಂದಣಾಧಿಕಾರಿಗಳು ನೀಡುವ ವರದಿ ಆಧರಿಸಿ ದರ ನಿಗದಿ ಪಡಿಸಲಾಗುವುದು. ಈಗಾಗಲೇ ಸರ್ಕಾರ ಪ್ರತಿ ಎಕರೆಗೆ 4.96 ಲಕ್ಷ ರೂ. ದರ ನಿಗದಿಪಡಿಸಿದ್ದು, ಸರ್ಕಾರದ ದರಕ್ಕೆ ಆಕ್ಷೇಪಣೆಗಳಿದ್ದಲ್ಲಿ ನಿಮ್ಮ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ತಹಶೀಲ್ದಾರ್ ಚಾಮರಸ ಪಾಟೀಲ್, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹ್ಮದ್ ಇರ್ಫಾನ್, ಕೆಐಎಡಿಬಿ ಅಧಿಕಾರಿ ಪ್ರಕಾಶ ಹಾಗೂ ಭೂ ಮಾಲೀಕರು ಇದ್ದರು.