Advertisement

ಒಪಿಎಸ್‌ V/S ಇಪಿಎಸ್‌; ಬಹುಮತ ಸಾಬೀತಿಗೆ ಕ್ಷಣಗಣನೆ

03:45 AM Feb 18, 2017 | Team Udayavani |

ಚೆನ್ನೈ: ಪಳನಿಯೋ, ಪನ್ನೀರೋ? ಕಳೆದ ಕೆಲವು ದಿನಗಳಿಂದ ಹಲವು ರಾಜಕೀಯ ನಾಟಕಗಳನ್ನು ನೋಡುತ್ತಾ ಬಂದಿರುವ ತಮಿಳರಲ್ಲಿ ಮೂಡಿರುವ ಪ್ರಶ್ನೆಯಿದು. ಇದಕ್ಕೆ ಶನಿವಾರ ಉತ್ತರ ದೊರಕಲಿದೆ. ಮಾಜಿ ಸಿಎಂ ಒ ಪನ್ನೀರ್‌ಸೆಲ್ವಂ ಮತ್ತು ಹಾಲಿ ಸಿಎಂ ಪಳನಿಸ್ವಾಮಿ ಇಬ್ಬರಿಗೂ ಶನಿವಾರ “ಮಾಡು ಇಲ್ಲವೇ ಮಡಿ’ ಪಂದ್ಯವಾಗಿದ್ದು, ಶಶಿಕಲಾರ ಬಂಟ ಪಳನಿಸ್ವಾಮಿ ಪಟ್ಟ ಉಳಿಸಿಕೊಳ್ಳುತ್ತಾರಾ ಎಂಬ ಕುತೂಹಲ ಮನೆಮಾಡಿದೆ.

Advertisement

ರಾಜ್ಯಪಾಲ ವಿದ್ಯಾಸಾಗರ್‌ ರಾವ್‌ ಅವರ ಸೂಚನೆಯನ್ವಯ, ಶನಿವಾರ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸಲಿದ್ದಾರೆ. ಅದರಲ್ಲಿ ಗೆದ್ದರೆ, ಅವರಿಗೆ ಸಿಎಂ ಪಟ್ಟ ನಿಕ್ಕಿಯಾಗಲಿದೆ. ಇಲ್ಲದಿದ್ದರೆ, ಮತ್ತೆ ರಾಜಕೀಯ ಸಂಗೀತಕುರ್ಚಿಯಾಟ ನೋಡುವ “ಭಾಗ್ಯ’ ತಮಿಳರದ್ದು.

ಬಹುಮತ ಸಾಬೀತಿಗೆ ಒಂದು ದಿನ ಬಾಕಿಯಿರುವಂತೆಯೇ ಶುಕ್ರವಾರ ತಮಿಳುನಾಡು ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ಮುಖ್ಯಮಂತ್ರಿ ಪಳನಿಸ್ವಾಮಿಗೆ ಹೊಸ ಆಘಾತವೆಂಬಂತೆ, ರಾಜ್ಯದ ಮಾಜಿ ಡಿಜಿಪಿ, ಮೈಲಾಪುರ ಶಾಸಕ ಆರ್‌ ನಟರಾಜ್‌ ಅವರು ಶುಕ್ರವಾರ ದಿಢೀರನೆ ನಿಷ್ಠೆ ಬದಲಿಸಿದ್ದು, ಸರ್ಕಾರದ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿದ್ದಾರೆ. ನಟರಾಜ್‌ ಅವರು ಪನ್ನೀರ್‌ಸೆಲ್ವಂ ಬಣಕ್ಕೆ ಬೆಂಬಲ ಸೂಚಿಸಿದ ಕಾರಣ, ಪಳನಿಸ್ವಾಮಿ ಅವರ ಬೆಂಬಲಿತ ಶಾಸಕರ ಸಂಖ್ಯೆ 124ರಿಂದ 123ಕ್ಕೆ ಇಳಿಕೆಯಾಗಿದೆ.

ಇನ್ನೊಂದೆಡೆ, ಪನ್ನೀರ್‌ಸೆಲ್ವಂ ಅವರ ಬೆಂಬಲಿಗ ಶಾಸಕರ ಸಂಖ್ಯೆ 11ಕ್ಕೇರಿಕೆಯಾಗಿದೆ. ಒಂದು ವೇಳೆ ಅವರು ಇನ್ನೂ 5-6 ಶಾಸಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ, ಬಹುಮತ ಸಾಬೀತುಪಡಿಸುವಲ್ಲಿ ಪಳನಿಸ್ವಾಮಿ ವಿಫ‌ಲರಾಗಲಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ 134 ಶಾಸಕರಿದ್ದು, ಬಹುಮತಕ್ಕೆ 118 ಶಾಸಕರ ಬೆಂಬಲ ಬೇಕು. ಶನಿವಾರ ನಡೆಯಲಿರುವ ಬಹುಮತ ಸಾಬೀತಿನ ಪ್ರಕ್ರಿಯೆಯು ತಮಿಳುನಾಡು ವಿಧಾನಸಭೆಯಲ್ಲಿ 30 ವರ್ಷಗಳ ನಂತರ ಮೊದಲ ಬಾರಿಗೆ ನಡೆಯುತ್ತಿರುವ ವಿದ್ಯಮಾನವಾಗಿದೆ. àಗಾಗಿ, ಈ ಎಐಎಡಿಎಂಕೆ ವರ್ಸಸ್‌ ಎಐಎಡಿಎಂಕೆ ಸಮರದ ಕ್ಲೈಮ್ಯಾಕ್ಸ್‌ ವೀಕ್ಷಣೆಗೆ ಇಡೀ ದೇಶಕ್ಕೆ ದೇಶವೇ ಸಜ್ಜಾಗಿದೆ.

ಸರ್ಕಾರದ ವಿರುದ್ಧ ಡಿಎಂಕೆ ಮತ
ಪಳನಿಸ್ವಾಮಿ ಸರ್ಕಾರದ ವಿರುದ್ಧ ಮತ ಚಲಾಯಿಸಲು ಡಿಎಂಕೆ ನಿರ್ಧರಿಸಿದೆ. ಶುಕ್ರವಾರ ನಡೆದ ಶಾಸಕಾಂಗ ಪಕ್ಷದ ಸಭೆಯ ಬಳಿಕ ನಾಯಕ ಎಂ.ಕೆ.ಸ್ಟಾಲಿನ್‌ ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ಎಐಎಡಿಎಂಕೆ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರ ಬದುಕು ದುಸ್ತರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‌ ಬೆಳಗ್ಗೆ 9 ಗಂಟೆಗೆ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಶುಕ್ರವಾರ ಸೆಲ್ವಂ ಬಣದ ಸದಸ್ಯರು ಸ್ಪೀಕರ್‌ ಪಿ ಧನಪಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Advertisement

ಎಐಎಡಿಎಂಕೆಯಿಂದ ಶಶಿಕಲಾ ವಜಾ:
ಬಹುಮತ ಸಾಬೀತಿನ ಮುನ್ನಾ ದಿನ ನಡೆದ ರಾಜಕೀಯ ಬೆಳವಣಿಗೆಯಲ್ಲಿ, ಪನ್ನೀರ್‌ಸೆಲ್ವಂ ಬಣವು ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾಗೂ ಅವರ ಸಂಬಂಧಿಗಳಾದ ದಿನಕರ್‌ ಮತ್ತು ಎಸ್‌ ವೆಂಕಟೇಶ್‌ರನ್ನು ಪಕ್ಷದಿಂದ ವಜಾ ಮಾಡಿ ಆದೇಶ ಹೊರಡಿಸಿದೆ. ಇವರು ಪಕ್ಷದ ತತ್ವಾದರ್ಶಗಳನ್ನು ಉಲ್ಲಂ ಸಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಈ ಹಿಂದೆ ಶಶಿಕಲಾರಿಂದ ವಜಾಗೊಂಡಿರುವ ಇ ಮಧುಸೂದನ್‌ ಹೇಳಿದ್ದಾರೆ. ಏತನ್ಮಧ್ಯೆ, ಶಶಿಕಲಾ ಬಣವು ಪಕ್ಷದ ಹಿರಿಯ ನಾಯಕ ಕೆ.ಎ. ಸೆಂಗೊಟ್ಟಾಯನ್‌ರನ್ನು ವಿಧಾನಸಭೆ ನಾಯಕನನ್ನಾಗಿ ಆಯ್ಕೆ ಮಾಡಿದೆ.

ನೀವು ಹೇಗೆ ಆಯ್ಕೆಯಾದಿರಿ?
ಶಶಿಕಲಾಗೆ ಮತ್ತೂಂದು ಹೊಡೆತ ಎಂಬಂತೆ, ಚುನಾವಣಾ ಆಯೋಗವು ಅವರ ಆಯ್ಕೆಯನ್ನೇ ಪ್ರಶ್ನಿಸಿದೆ. ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಮ್ಮನ್ನು ಹೇಗೆ ಆಯ್ಕೆ ಮಾಡಲಾಯಿತು ಎಂದು ಶಸಿಕಲಾರನ್ನು ಆಯೋಗವು ಪ್ರಶ್ನಿಸಿದೆ. ಫೆ.28ರೊಳಗೆ ಇದಕ್ಕೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ನನ್ನನ್ನು ನೋಡಿ ಮುಗುಳ್ನಗಬೇಡಿ, ಪ್ಲೀಸ್‌
ತಮಿಳುನಾಡು ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಪಳನಿಸ್ವಾಮಿ ಅವರಿಗೆ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್‌ ಅವರು ಎರಡು ಸಲಹೆಗಳನ್ನು ನೀಡಿದ್ದಾರೆ. ಮೊದಲನೆಯದ್ದು- “ನನ್ನ ಮುಖ ನೋಡಿದಾಗ ಮುಗುಳ್ನಗಬೇಡಿ’ ಎಂದಾದರೆ, ಎರಡನೆಯದ್ದು- “ಶಶಿಕಲಾರ ರಿಮೋಟ್‌ ಕಂಟ್ರೋಲ್ಡ್‌ ನಾಯಕ ಆಗಬೇಡಿ’ ಎಂದು. ನಗಬೇಡಿ ಎಂದು ಹೇಳಿದ್ದೇಕೆ ಎಂದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ತಮಿಳುನಾಡಿನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ಮಾಜಿ ಸಿಎಂ ಪನ್ನೀರ್‌ಸೆಲ್ವಂ ವಿರುದ್ಧ ಹರಿಹಾಯ್ದಿದ್ದ ಶಶಿಕಲಾ ಅವರು, “ಪನ್ನೀರ್‌ ಅವರು ಬಂಡಾಯವೇಳಲು ಡಿಎಂಕೆ ಕಾರಣ. ಸೆಲ್ವಂ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಹೇಳಿದ್ದರು. ಇದಕ್ಕೆ ಡಿಎಂಕೆ ನಾಯಕ ಸ್ಟಾಲಿನ್‌ ಹಾಗೂ ಪನ್ನೀರ್‌ಸೆಲ್ವಂ ವಿಧಾನಸಭೆಯಲ್ಲಿ ಪರಸ್ಪರ ಮುಗುಳ್ನಕ್ಕಿದ್ದೇ ಸಾಕ್ಷ್ಯ ಎಂದೂ ನುಡಿದಿದ್ದರು. ಈ ಹಿನ್ನೆಲೆಯಲ್ಲಿ, ಇನ್ನು ಪಳನಿಯವರೂ ಮುಗುಳ್ನಕ್ಕರೆ, ಅವರ ಸಿಎಂ ಸ್ಥಾನಕ್ಕೂ ಎಲ್ಲಿ ಕುತ್ತು ಬರಬಹುದು ಎಂಬರ್ಥದಲ್ಲಿ ಸ್ಟಾಲಿನ್‌ ವ್ಯಂಗ್ಯವಾಡಿದ್ದಾರೆ.

30 ವರ್ಷಗಳ ನಂತರ
ತಮಿಳುನಾಡು ವಿಧಾನಸಭೆಯಲ್ಲಿ 30 ವರ್ಷಗಳ ಬಳಿಕ ಬಹುಮತ ಸಾಬೀತುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ, ಅಂದರೆ 1988ರಲ್ಲಿ ನಡೆದ ರಾಜಕೀಯ ಬಿಕ್ಕಟ್ಟು ಎಂಜಿಆರ್‌ ಅವರ ಪತ್ನಿ ಜಾನಕಿ ಅವರನ್ನು ಬಹುಮತ ಸಾಬೀತುಪಡಿಸುವಂತೆ ಮಾಡಿತ್ತು. ಸಭಾತ್ಯಾಗ, ಗದ್ದಲ, ಗೊಂದಲಗಳ ನಡುವೆ ಕೊನೆಗೂ ವಿಶ್ವಾಸಮತ ಗಳಿಸುವಲ್ಲಿ ಜಾನಕಿ ಅವರು ಯಶಸ್ವಿಯಾಗಿದ್ದರು. ಆದರೆ, ಇದಾದ ಎರಡೇ ದಿನಗಳಲ್ಲಿ ಅವರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಿತು. ಅಸೆಂಬ್ಲಿಯಲ್ಲಿ ನಡೆದ ಗದ್ದಲವನ್ನೇ ಮುಂದಿಟ್ಟುಕೊಂಡು ಸರ್ಕಾರವನ್ನು ವಜಾ ಮಾಡಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಆದೇಶ ಹೊರಡಿಸಿದ್ದರು.

ಬಲಾಬಲ
ವಿಧಾನಸಭೆ ಒಟ್ಟು ಸದಸ್ಯಬಲ- 235
ಬಹುಮತಕ್ಕೆ ಬೇಕಾಗಿರುವುದು-118
ಶಶಿಕಲಾ ಬಣದಲ್ಲಿರುವ ಶಾಸಕರು- 123
ಪನ್ನೀರ್‌ಸೆಲ್ವಂ ಬಣದಲ್ಲಿರುವವರು-11

Advertisement

Udayavani is now on Telegram. Click here to join our channel and stay updated with the latest news.

Next