Advertisement

ಸೋರಿಕೆ ರಹಸ್ಯದ ಹಿಂದೆ ಆಪರೇಟರ್‌ಗಳು?

06:20 AM Jul 10, 2020 | Lakshmi GovindaRaj |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಯಲ್ಲಿ ಆದೇಶಕ್ಕೂ ಮೊದಲೇ ಕಡತಗಳು ಖಾಸಗಿ ಡೆವಲಪರ್‌ಗಳ ಕೈಸೇರುತ್ತಿದ್ದು, ಇದರ ಮೂಲಬೇರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ  ಡಾಟಾ ಎಂಟ್ರಿ ಆಪರೇಟರ್‌ಗಳು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಪ್ರಾಧಿಕಾರದಲ್ಲಿನ ಸುಮಾರು 103 ಡಾಟಾ ಎಂಟ್ರಿ ಆಪರೇಟರ್‌ಗಳ ಸ್ಥಳ ಬದಲಾವಣೆ ಮಾಡಲಾಯಿತು.

Advertisement

ಈ “ಸ್ಥಾನ ಪಲ್ಲಟ’ದ ಹಿಂದಿನ ರಹಸ್ಯ ಕೆಲ  ಆಪರೇಟರ್‌ಗಳು, ಕಡತಗಳಲ್ಲಿನ ಪ್ರಮುಖ ನೋಟ್‌ಶೀಟ್‌ಗಳನ್ನು ಆದೇಶಕ್ಕೂ ಮೊ ದಲೇ ಮೊಬೈಲ್‌ನಲ್ಲಿ ಸೆರೆಹಿಡಿದು, ವಾಟ್ಸ್‌ಆ್ಯಪ್‌ ಅಥವಾ ಸಿಡಿಗಳ ಮೂಲಕ ಡೆವಲಪರ್‌ಗಳು ಮತ್ತು ಮಧ್ಯವರ್ತಿಗಳಿಗೆ ಮಾರಾಟ ಮಾಡಿದ್ದಾರೆ.  ತೆಗೆ  ಕಡತ ತಿದ್ದುಪಡಿ ಆರೋಪ ಕೇಳಿಬಂದಿದೆ. ಈ ಸ್ಥಾನ ಪಲ್ಲಟಕ್ಕೆ ಸಂಬಂಧಿಸಿದಂತೆ ಹೊರಡಿಸಿ ರುವ ಆದೇಶ ರದ್ದತಿಗೆ ಈಗ ಇನ್ನಿಲ್ಲದ ಕಸರತ್ತು ನಡೆದಿದ್ದು, ಸಾಮಾನ್ಯ ಡಾಟಾ ಎಂಟ್ರಿ ಆಪರೇಟರ್‌ ಗಳು ತಮ್ಮ ಈ ಹಿಂದಿನ ಸ್ಥಾನದಲ್ಲೇ  ಉಳಿಯಲು  ಲಕ್ಷಾಂತರ ರೂ. ಸುರಿಯಲು ತಯಾರಾಗಿದ್ದಾರೆ. ಅಷ್ಟೇ ಅಲ್ಲ, ರಾಜಕೀಯ ನಾಯಕ ರಿಂದ ಒತ್ತಡ ತರುತ್ತಿದ್ದಾರೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಎರಡು ವರ್ಷಗಳಿಗೊಮ್ಮೆ ಅಧಿಕಾರಿಗಳೇ  ಬದಲಾಗುತ್ತಾರೆ. ಆದರೆ, ನಗರ ಯೋಜನೆ, ಭೂಸ್ವಾಧೀನ ಸೇರಿದಂತೆ ಬಿಡಿಎ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳು ದಶಕದಿಂದಲೂ ಆಯಕಟ್ಟಿನ ಜಾಗಗಳಲ್ಲಿ ಠಿಕಾಣಿ ಹೂಡಿರುವುದೂ ಬೆಳಕಿಗೆಬಂದಿದೆ. ಈ ಮಧ್ಯೆ ಬಹುತೇಕ ಹೊರಗುತ್ತಿಗೆ ಪಡೆದ ಕಂಪನಿಗಳ ಅವಧಿ ಮುಗಿದಿ ದ್ದರೂ, ಒಂದೂವರೆ-ಎರಡು ವರ್ಷಗಳಿಂದ ತಾತ್ಕಾಲಿಕ ಅವಧಿ ವಿಸ್ತರಣೆಯೊಂದಿಗೆ ಮುಂದುವರಿ ಯುತ್ತಿವೆ. ಇವರೆಲ್ಲರಿಗೂ ನೂತನ ಆಯುಕ್ತರು ದಿಢೀರ್‌ ಸ್ಥಾನ ಬದಲಾವಣೆ ಆದೇಶದ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಇದರ ಬೆನ್ನಲ್ಲೇ ಈ ವಿಷಯವೂ ಚರ್ಚಾಗ್ರಾಸವಾಗಿದೆ.

ಸಿಎಂ ಕಚೇರಿಯಿಂದ ಶಿಫಾರಸು: ಈ ಹಿಂದೆ ಇದೇ ರೀತಿ ಡಾಟಾ ಎಂಟ್ರಿ ಆಪರೇಟರ್‌ (ಡಿಇಒ) ವೊಬ್ಬರನ್ನು ಕೇವಲ ಸ್ಥಾನ ಬದಲಾವಣೆ ಮಾಡಿದ್ದರಿಂದ ಮೂಲ ಸ್ಥಾನದಲ್ಲೇ ಉಳಿಸಿಕೊಳ್ಳು ವಂತೆ ಸ್ವತಃ ಸಮ್ಮಿಶ್ರ ಸರ್ಕಾರದ  ಸಂದರ್ಭದಲ್ಲಿ ಮುಖ್ಯಮಂತ್ರಿ ಕಚೇರಿಯಿಂದಲೇ ಶಿಫಾರಸು ಬಂದಿತ್ತು. ಈಗ ನೂರಕ್ಕೂ ಹೆಚ್ಚು ಡಿಇಒಗಳ ಸ್ಥಾನ ಬದಲಾವಣೆ ಮಾಡಿರುವುದರಿಂದ ಮೇಲಿನವರಿಂದ ಒತ್ತಡಗಳು ಬರುವುದರಲ್ಲಿ ಅನುಮಾನ ಇಲ್ಲ ಎಂದು ಹೆಸರು  ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಅಂದಹಾಗೆ, ಪ್ರಾಧಿಕಾರದ ಎಲ್ಲ ವಿಭಾಗಗಳೂ ಗಣಕೀಕೃತಗೊಳ್ಳುತ್ತಿದ್ದು, ಹಲವಾರು ತಂತ್ರಾಂಶಗಳು ಬಳಕೆಯಲ್ಲಿವೆ. ಅವುಗಳ ನೆಟ್‌ವರ್ಕಿಂಗ್‌ ನಿರ್ವ ಹಣೆಗೆ ಪ್ರೋಗ್ರಾಮರ್‌, ಸಹಾಯಕ  ಪ್ರೋಗ್ರಾ ಮರ್‌, ನೆಟ್‌ವರ್ಕಿಂಗ್‌ ಎಂಜಿನಿಯರ್‌, ಹಾರ್ಡ್‌ ವೇರ್‌ ಎಂಜಿನಿಯರ್‌, ಕಡತಗಳಲ್ಲಿನ ಮಾಹಿತಿಯ ನ್ನು ಬೆರಳಚ್ಚುಪಡಿಸುವ ಕೆಲಸ ಈ ಡಾಟಾ ಎಂಟ್ರಿ ಆಪರೇಟರ್‌ಗಳು ಮಾಡುತ್ತಾರೆ. ಇವರಿಗೆ ಮಾಸಿಕ ಸುಮಾರು 15 ಸಾವಿರ  ರೂ. ವೇತನ ಇರುತ್ತದೆ. ಆದರೂ, ಇದರಲ್ಲಿ ಕೆಲವರು ಕಚೇರಿಗಳಿಗೆ ಬರುವುದು ಫಾಚ್ಯುìನರ್‌, ಎರ್ಟಿಗಾದಂತಹ ಐಷಾರಾಮಿ ಕಾರುಗಳಲ್ಲಿ ಎನ್ನುವುದು ವಿಶೇಷ!

Advertisement

ಡಿಇಒ ಗೈರಿದ್ದರೂ ಹಾಜರಿ! ವೇತನವೂ ಪಾವತಿ!!: ಮಹಿಳಾ ಡಿಇಒ ಒಬ್ಬರು ಗೈರು ಇದ್ದರೂ, ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜತೆಗೆ ವೇತನವೂ ಪಾವತಿಯಾಗಿದೆ! ಈಚೆಗೆ ಈ ಗೋಲ್‌ಮಾಲ್‌ ಬೆಳಕಿಗೆ ಬಂದಿದೆ. ದೀರ್ಘಾವಧಿ ಗೈರುಹಾಜರಾಗಿದ್ದ ಮಹಿಳಾ ಡಿಇಒ ಹೆಸರಿನಲ್ಲಿ ಮತ್ತೂಬ್ಬ ಡಿಇಒ ಹಾಜರಾತಿ ದೃಢೀಕರಣ ಪತ್ರವನ್ನು ಒದಗಿಸಿ, ಸುಮಾರು 66 ಸಾವಿರ ರೂ. ವೇತನ ಮಂಜೂರು ಮಾಡಿಸಿಕೊಂಡ ಘಟನೆಯೂ ಬಿಡಿಎ ಜಾಗೃತ ದಳದ  ವಿಚಾರಣೆಯಿಂದ ದೃಢಪಟ್ಟಿದೆ. ದೀರ್ಘ‌ಕಾಲ ಗೈರುಹಾಜರಾಗಿದ್ದ ಡಿಇಒ ಎನ್‌. ನಂದಿನಿ

ಎಂಬುವರ ಹೆಸರಿನಲ್ಲಿ ಹಾಜರಾತಿ ದೃಢೀಕರಣ ಪತ್ರವನ್ನು ಇಡಿಪಿ ವಿಭಾಗದ ಸಿಸ್ಟಮ್‌ ಮ್ಯಾನೇಜರ್‌ ಕೆ. ಚೇತನ್‌ ಮತ್ತು ಸಹಾಯಕ  ಪ್ರೋಗ್ರಾಮರ್‌ ಪುನೀತ್‌ ದಿವ್ಯಸ್ವರೂಪ್‌ ಎಂಬುವರು ಹೊರಗುತ್ತಿಗೆ ಸಂಸ್ಥೆಗೆ ನೀಡಿ, ವೇತನ ಮಂಜೂರು ಮಾಡಿಸಿದ್ದಾರೆ. ನಂತರ ಆ ಮೊತ್ತವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಬಿಡಿಎ ಜಾಗೃತ ದಳ ತಿಳಿಸಿದೆ.  ಈ ಆರೋಪದ ಹಿನ್ನೆಲೆಯಲ್ಲಿ ಹಣ ದುರುಪಯೋಗಪಡಿಸಿಕೊಂಡ ಡಿಇಒಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ ಬಿಡಿಎ ಆಯುಕ್ತರು ಈಚೆಗೆ ಆದೇಶ ಹೊರಡಿಸಿದ್ದಾರೆ.

ಸುಮಾರು ವರ್ಷಗಳಿಂದ ಒಂದೇ ಕಡೆ ಡಿಇಒಗಳು ಬೀಡುಬಿಟ್ಟಿದ್ದರು. ಆಡಳಿತಾತ್ಮಕ ಲೋಪದೋಷಗಳನ್ನು ಸರಿಪಡಿಸಲು ಈ ಬದಲಾವಣೆ ಅನಿವಾರ್ಯ ಕೂಡ ಆಗಿತ್ತು. ಆಡಳಿತಾತ್ಮಕ ಸುಧಾರಣೆಗೆ ಇದು ಮೊದಲ ಹೆಜ್ಜೆಯಾಗಿದೆ.  ಮುಂದಿನ ದಿನಗಳಲ್ಲಿ ಇನ್ನಷ್ಟು ಬದಲಾವಣೆಗಳನ್ನು ತರಲಾಗುವುದು.
-ಎಚ್‌.ಆರ್‌. ಮಹದೇವ್‌, ಆಯುಕ್ತರು, ಬಿಡಿಎ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next