Advertisement
ಆಪರೇಷನ್ ಕಮಲ ಸಂದರ್ಭದಲ್ಲಿ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿದವರನ್ನು ಪ್ರಳಯವಾದರೂ ಸರಿ, ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದ ಸಿದ್ದರಾಮಯ್ಯ “ತತ್ವ – ಸಿದ್ಧಾಂತ’ ಒಪ್ಪಿದವರು ಪಕ್ಷಕ್ಕೆ ಬರಬಹುದು ಎಂದು ಹೇಳಿದ್ದಾರೆ. ಇಷ್ಟು ದಿನ “ಆಪರೇಷನ್ ಹಸ್ತ’ ವಿಚಾರದಲ್ಲಿ ತಟಸ್ಥರಾಗಿದ್ದ ಅವರು ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ಇದು ಲೋಕಸಭಾ ಚುನಾವಣೆ ದೃಷ್ಟಿಯಿಂದ ಅನ್ಯಪಕ್ಷದವರಿಗೆ ನೀಡಿದ ಬಹಿರಂಗ ಆಹ್ವಾನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.ಇದಕ್ಕೆ ಪೂರಕ ಎಂಬಂತೆ ಬಿಜೆಪಿಯಲ್ಲೂ ಕೆಲವು ಬೆಳವಣಿಗೆ ನಡೆದಿದೆ. ಶಾಸಕ ಎಸ್.ಟಿ. ಸೋಮಶೇಖರ್ ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಂಬಂಧಪಟ್ಟಂತೆ ಸಿದ್ಧತೆ ಸಭೆ ಕರೆಯುವ ಮೂಲಕ ಕಾಂಗ್ರೆಸ್‌ಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿಯ ಜತೆಗೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮುಖಂಡರಿಗೂ ಕಾಂಗ್ರೆಸ್ ಗಾಳ ಹಾಕಿದೆ. ಈ ಸಂಬಂಧ ಜಿಲ್ಲಾವಾರು ಟಾಸ್ಕ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತುಮಕೂರು, ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಹಾಲಿ ಶಾಸಕರ ಜತೆಗೆ ಪರಾಜಿತ ಅಭ್ಯರ್ಥಿಗಳನ್ನು ಅವರು ಸಂಪರ್ಕಿಸುತ್ತಿದ್ದಾರೆ. ಹೀಗಾಗಿ ಮುಂದಿನ ಎರಡು ತಿಂಗಳ ಕಾಲ ಈ ಪ್ರಕ್ರಿಯೆ ತೀವ್ರವಾಗಿರಲಿದೆ.
Related Articles
ಆಪರೇಷನ್ ಹಸ್ತದ ಬಗ್ಗೆ ಆರಂಭದಲ್ಲಿ ವಿಚಲಿತಗೊಂಡಿದ್ದ ಬಿಜೆಪಿ ಈಗ ಪಕ್ಷ ತೊರೆಯಲು ಮುಂದಾದವರಿಗೆ ಬಾಗಿಲು ತೆರೆಯಲು ನಿರ್ಧರಿಸಿದೆ. ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ, ನಳಿನ್ ಕುಮಾರ್ ಸಹಿತ ಬಿಜೆಪಿ ನಾಯಕರು ಆರಂಭದಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಇದು ಫಲ ನೀಡುವ ಪರಿಶ್ರಮ ಅಲ್ಲವೆಂದು ಅರ್ಥವಾಗುತ್ತಿದ್ದಂತೆ ಪೂರ್ವಾಶ್ರಮ ಸೇರಲು ಯೋಚಿಸುತ್ತಿರುವವರನ್ನು ನಿರ್ಲಕ್ಷಿಸಲು ನಿರ್ಧರಿಸಿದ್ದಾರೆ. ಮೂಲ ಬಿಜೆಪಿ ಅಥವಾ ಪಕ್ಷಕ್ಕೆ ಬಂದು ದಶಕಕ್ಕೂ ಹೆಚ್ಚು ಸಮಯ ಕಳೆದ ನಾಯಕರು ಪಕ್ಷ ತೊರೆಯಲು ಮುಂದಾದರೆ ಮಾತ್ರ ಸಮಾಧಾನಪಡಿಸೋಣ. ಉಳಿದವರಿಗೆ ಬಾಗಿಲು ತೆರೆಯೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಬಿಜೆಪಿ ವರಿಷ್ಠರು ಕೂಡ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಮಾಹಿತಿ ಆ ಪಕ್ಷದ ನಾಯಕರಿಂದ ಲಭ್ಯವಾಗಿದೆ. “ಆಪರೇಷನ್ ಹಸ್ತ ಪಕ್ಷದ ಮೂಲ ಕೇಡರ್‌ಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮಾತ್ರ ಬಿಜೆಪಿ ಗಮನಹರಿಸಿದೆ ಎಂದು ಹೇಳಲಾಗಿದೆ.
Advertisement