ಕೊಪ್ಪಳ: ಆಸ್ಪತ್ರೆಯಲ್ಲಿ ನೀರು ಪೂರೈಕೆಯಾಗದಿದ್ದಕ್ಕೆ ಗರ್ಭಿಣಿಯರ ಹಾಗೂ ರೋಗಿಗಳ ಶಸ್ತ್ರ ಚಿಕಿತ್ಸೆಯನ್ನೇ
ಮುಂದೂಡಿದ ಪ್ರಸಂಗ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ನಗರದ ಜಿಲ್ಲಾಸ್ಪತ್ರೆಗೆ ನಿತ್ಯವೂ ನೂರಾರು ರೋಗಿಗಳು ದಾಖಲಾಗುತ್ತಾರೆ. ಇದಲ್ಲದೇ ಗರ್ಭಿಣಿಯರು ಹೆರಿಗೆ ದಿನಾಂಕ ಬಂದ ತಕ್ಷಣ ಆಸ್ಪತ್ರೆಗೆದಾಖಲಾಗುತ್ತಾರೆ. ಆದರೆ, ಆಸ್ಪತ್ರೆ ಆವರಣದಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಜೆಸಿಬಿಯೊಂದು ಏಕಾಏಕಿ ಟ್ರಾನ್ಸ್ ಫಾರ್ಮರ್ ಕಂಬಕ್ಕೆ ತಾಗಿದ ಪರಿಣಾಮ ವಿದ್ಯುತ್ ತಂತಿ ಹರಿದು ಬಿತ್ತು. ಅದೇ ಟ್ರಾನ್ಸ್‌ಫಾರ್ಮರ್ ಮೂಲಕವೇ ಆಸ್ಪತ್ರೆಗೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ವಿದ್ಯುತ್ ಲೈನ್ ಹರಿದು ಬಿದ್ದಿದ್ದರಿಂದ ಗುರುವಾರದಿಂದ ಆಸ್ಪತ್ರೆಗೆ ನೀರು ಪೂರೈಕೆ ಸ್ಥಗಿತವಾಗಿದೆ.
ಇದನ್ನರಿತ ವೈದ್ಯರು ರೋಗಿಗಳ ಆಪರೇಷನ್ ಮಾಡೋದನ್ನೇ ಮುಂದೂಡಿದ್ದರು. ಕೊನೆಗೆ, ಜನರ ಆಕ್ರೋಶಕ್ಕೆ ಗುರಿಯಾಗಿ ಕೂಡಲೇ ಬ್ಯಾರಲ್ ಮೂಲಕ ನೀರು ಸಂಗ್ರಹಿಸುವ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಯಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ, ಆಸ್ಪತ್ರೆ ಆವರಣದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಟ್ರಾನ್ಸಫಾರ್ಮರ್‌ಗೆ ಜೆಸಿಬಿ ತಾಗಿದ್ದರಿಂದ ವಿದ್ಯುತ್ ತಂತಿ ಹರಿದು ಬಿದ್ದಿವೆ. ಹೀಗಾಗಿ, ಆಸ್ಪತ್ರೆಗೆ ನೀರು ಪೂರೈಕೆಯಾಗಿಲ್ಲ. ನಾವು ಬ್ಯಾರಲ್ ಮೂಲಕ ನೀರು ಸಂಗ್ರಹ ಮಾಡಿಕೊಂಡಿದ್ದೇವೆ. ಈವರೆಗೂ 9 ಆಪರೇಷನ್ ಮಾಡಿದ್ದೇವೆ. ಯಾವುದೇ ಆಪರೇಷನ್‌ಗಳನ್ನು ಮುಂದೂಡಿಲ್ಲ. ನಮ್ಮ ಚಿಕಿತ್ಸಾ ಕಾರ್ಯ ಸುಗಮವಾಗಿ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.