Advertisement

ಆಪರೇಷನ್‌ ನಾರ್ಮಲ್‌; ಪ್ರೇಕ್ಷಕ ಔಟ್‌ ಆಫ್ ಡೇಂಜರ್‌!

10:36 AM Jul 22, 2017 | |

“ಸಾರ್‌ ನನಗೊಂದು ಅನುಮಾನ. ಕಿಡ್ನಾಪ್‌ ಮಾಡಿರೋರು ನಮ್ಮ ನಡುವೆಯೇ ಇದ್ದಾರೆ…’ ಹೀಗಂತ ಹಿಗ್ಗಾಮುಗ್ಗ ಒದೆ ತಿಂದ ಅವನು, ಪೊಲೀಸರ ಮುಂದೆ ಎರಡು ಸಲ ಹೇಳಿರುತ್ತಾನೆ. ಅವನು ಹಾಗೆ ಹೇಳುವ ಹೊತ್ತಿಗೆ, ಉದ್ಯಮಿ ಮಗನ ಕಿಡ್ನಾಪ್‌ ಟ್ರ್ಯಾಕ್‌ ಮತ್ತು ಲವ್‌ ಟ್ರ್ಯಾಕ್‌ ಇವೆರೆಡೂ ಒಟ್ಟೊಟ್ಟಿಗೇ ನಡೆದು ಹೋಗಿರುತ್ತೆ. ಹುಡುಗ, ಹುಡುಗಿ ನಡುವೆ ಹುಟ್ಟಿಕೊಳ್ಳುವ ಲವ್‌ ಮತ್ತು ತುಂಬಾ ಜಾಣತನದಿಂದಾಗುವ ಕಿಡ್ನಾಪ್‌, ಇವೆರೆಡನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಡುವ ಮೂಲಕ ಸಲೀಸಾಗಿ “ಆಪರೇಷನ್‌’ ಮಾಡಿದ್ದಾರೆ ಸುನಿ. ಇದೊಂದು “ಸಿಂಪಲ್‌’ ಕಥೆ.

Advertisement

ಆದರೆ, ಹೇಳುವ ವಿಧಾನದಲ್ಲಿ ಕೊಂಚ ಹೊಸತನವಿದೆ. ಒಂದು ಕಿಡ್ನಾಪ್‌ ಕಥೆಯನ್ನು ತುಂಬಾ ಕುತೂಹಲವಾಗಿ ಹೇಳುವ ಜಾಣ್ಮೆ ಗೊತ್ತಿರುವುದರಿಂದಲೇ ಅಲಮೇಲಮ್ಮನ ಆಪರೇಷನ್‌ ಎಲ್ಲೂ ಬೋರ್‌ ಎನಿಸುವುದಿಲ್ಲ. ಹಾಗಂತ, ಇಡೀ ಚಿತ್ರದಲ್ಲಿ ಗೊಂದಲವಿಲ್ಲ ಅಂತೇನಿಲ್ಲ. ಮೊದಲರ್ಧ ಲವಲವಿಕೆಯಿಂದಲೇ ಸಾಗುವ ಚಿತ್ರ, ದ್ವಿತಿಯಾರ್ಧ ಕೆಲವು ಕಡೆ ಅಲ್ಲಲ್ಲಿ ನೋಡುಗನ ತಾಳ್ಮೆ ಪರೀಕ್ಷಿಸುತ್ತಾ ಹೋಗುತ್ತದೆ.

ಇನ್ನೇನು, ನೋಡುಗನಿಗೆ “ಆಪರೇಷನ್‌’ ಓವರ್‌ ಎನಿಸುತ್ತಿದ್ದಂತೆಯೇ, ಅಲ್ಲೊಂದು ಟ್ವಿಸ್ಟ್‌ ಸಿಕ್ಕು, ಚಿತ್ರದ ನೋಟವೇ ಬದಲಾಗುತ್ತೆ. ಅದೇ ಚಿತ್ರದ ಪ್ಲಸ್‌. ಮೊದಲೇ ಹೇಳಿದಂತೆ, ಇಲ್ಲೊಂದು ಕಿಡ್ನಾಪ್‌ ಕಥೆ ಇದೆ. ಜತೆಗೊಂದು ಪ್ರೀತಿಯ ಕಥೆಯೂ ಇದೆ. ಎರಡೂ ಕಥೆಯನ್ನು ಒಂದೊಂದು ಟ್ರ್ಯಾಕ್‌ನಲ್ಲಿ ಹೇಳುತ್ತಾ ಹೋದರೂ, ಕೊನೆಯಲ್ಲಿ ಒಂದಕ್ಕೊಂದು ಬೆಸೆದು, ಆಪರೇಷನ್‌ನ ಮೂಲ ಉದ್ದೇಶವನ್ನು ಹೊರಗೆಡವುತ್ತದೆ.

ಇದೊಂದು ಪಕ್ಕಾ ಕಮರ್ಷಿಯಲ್‌ ಸಿನಿಮಾ ಎನಿಸಿಕೊಳ್ಳದಿದ್ದರೂ, ಇಲ್ಲೊಂದಷ್ಟು ಥ್ರಿಲ್ಲಿಂಗ್‌ ಅಂಶಗಳಿವೆ. ಅದೇ ಆಪರೇಷನ್‌ನ ಮೂಲಾಧಾರ. ಇಲ್ಲಿ ಎಷ್ಟು ಹಣ ಖರ್ಚಾಗಿದೆ ಅನ್ನುವುದಕ್ಕಿಂತ, ಎಷ್ಟರಮಟ್ಟಿಗೆ ಬುದ್ಧಿ ಖರ್ಚಾಗಿದೆ ಅನ್ನೋದು ಮುಖ್ಯ. ಈಗಿನ ಟ್ರೆಂಡ್‌ಗೆ ಈ ಸಿನಿಮಾ ಒಗ್ಗುತ್ತೋ, ಇಲ್ಲವೋ ಅನ್ನೋ ಮಾತು ಪಕ್ಕಕ್ಕಿಟ್ಟು ನೋಡುವುದಾದರೆ, ಅಗತ್ಯತೆ, ಆಸೆ, ಆಶಯ, ಸಂಬಂಧ, ಅನುಬಂಧ ಮತ್ತು ವಾಸ್ತವತೆಯ ಸಮಸ್ಯೆಗಳ ಗುತ್ಛದೊಂದಿಗೆ ಚಿತ್ರ ಸಾಗುತ್ತೆ.

ಎರಡು ಟ್ರ್ಯಾಕ್‌ನಲ್ಲಿ ಸಾಗುವ ಕಥೆ ಆಗಾಗ ನೋಡುಗನ ತಾಳ್ಮೆ ಪರೀಕ್ಷಿಸಿದರೂ, ಅಲ್ಲಲ್ಲಿ ಕೇಳಿಬರುವ ಮಾತುಗಳು, ತುಣುಕು ಹಾಡುಗಳು  ತಾಳ್ಮೆಯನ್ನು ಸಮಾಧಾನಪಡಿಸುತ್ತವೆ. ಅಬ್ಬರವಿಲ್ಲದ ಮಾತುಗಳು, ಕಿವಿಗಡಚಿಕ್ಕುವ ಚೀರಾಟಗಳು ಇಲ್ಲಿ ಕೇಳಿಸುವುದಿಲ್ಲ. ಬದಲಾಗಿ, ಒಂದಷ್ಟು ಕಚಗುಳಿ ಇಡುವಂತಹ ಮಾತುಕತೆ, ಬೆರಳೆಣಿಕೆಯ ಥ್ರಿಲ್ಲಿಂಗ್‌ ದೃಶ್ಯಗಳು ಮಾತ್ರ ಸ್ವಲ್ಪ ಸಿನಿಮಾ ವೇಗವನ್ನು ಹೆಚ್ಚಿಸುತ್ತವೆ.

Advertisement

“ಸಿಂಪಲ್‌’ಲವ್‌ಸ್ಟೋರಿ ಗುಂಗಿನಲ್ಲಿ ಈ ಸಿನಿಮಾ ನೋಡಂಗಿಲ್ಲ. ಯಾಕೆಂದರೆ, ಇದೊಂದು ಮೈಂಡ್‌ಗೆಮ್‌ ಥರದ ಚಿತ್ರ. ಆಪರೇಷನ್‌ ಮಾಡೋವಾಗ, ಸಣ್ಣಪುಟ್ಟ ಗೊಂದಲ, ಒಂಚೂರು ಭಯ ಇರುವಂತೆ, ಇಲ್ಲಿಯೂ ಆ ಗೊಂದಲ ಕಾಣುವುದುಂಟು. ಆದರೂ, ಮನರಂಜನೆಗೆ ಮೋಸವಿಲ್ಲ. ಮಿಸ್ಟರ್‌ ಪರಮೇಶ್‌ ಅಲಿಯಾಸ್‌ ಪರ್ಮಿ ಒಬ್ಬ ಅನಾಥ. ಅವನದು ತರಕಾರಿ ಮಾರ್ಕೆಟ್‌ನಲ್ಲಿ ಹೋಲ್‌ಸೇಲ್‌ ತರಕಾರಿ ಹರಾಜು ಹಾಕೋ ಕೆಲಸ.

ಬ್ರಾಂಡೆಡ್‌ ವಸ್ತುಗಳೆಂದರೆ ಅವನಿಗೆ ಎಲ್ಲಿಲ್ಲದ ಪ್ರೀತಿ. ಕಾಲುಂಗುರವಿಲ್ಲದ ಹುಡುಗಿಯರು ಅವನಿಗೆ ಮದ್ವೆ ಹೆಣ್ಣಂತೆ ಕಾಣಾ¤ರೆ. ಅಂಥಾ ಹೊತ್ತಲ್ಲಿ, ಟೀಚರ್‌ವೊಬ್ಬಳ ಪರಿಚಯವಾಗಿ, ಅದು ಸ್ನೇಹಕ್ಕೆ ತಿರುಗಿ, ಪ್ರೀತಿಯೂ ಶುರುವಾಗುತ್ತೆ. ಇನ್ನೇನು ಮದ್ವೆ ಫಿಕ್ಸ್‌ ಆದ ಖುಷಿಯಲ್ಲಿರುವಾಗಲೇ, ಪರ್ಮಿ ಕಿಡ್ನಾಪ್‌ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗ್ತಾನೆ. ಆ ಕಿಡ್ನಾಪ್‌ ಮಾಡಿದ್ದು ಯಾರು,

ಆ ಕಿಡ್ನಾಪ್‌ ಪ್ರಕರಣದಿಂದ ಪರ್ಮಿ ಹೊರಬರುತ್ತಾನಾ, ಪ್ರೀತಿಸಿದ ಹುಡುಗಿ ಜತೆ ಮದ್ವೆ ಆಗುತ್ತಾ, ಅಲಮೇಲಮ್ಮ ಅನ್ನೋರ್ಯಾರು, ಇತ್ಯಾದಿ ವಿಷಯ ತಿಳಿಯಬೇಕಾದರೆ, “ಆಪರೇಷನ್‌’ಗೊಳಪಡಬಹುದು! ನಾಯಕ ರಿಷಿ ನಟನೆಯಲ್ಲಿ ಲವಲವಿಕೆ ಇದೆ. ಕೆಲವು ಕಡೆ ಓವರ್‌ ಆ್ಯಕ್ಟಿಂಗ್‌ ಎನಿಸಿದರೂ, ತಕ್ಕಮಟ್ಟಿಗೆ ಗಮನಸೆಳೆಯುತ್ತಾರೆ. ಶ್ರದ್ಧಾ ಶ್ರೀನಾಥ್‌ ಇಲ್ಲಿ ಪ್ರೇಮಿಯಾಗಿ, ಟೀಚರ್‌ ಆಗಿ ಇಷ್ಟವಾಗುತ್ತಾರೆ.

ಸೀರೆಗಿಂತ ಅವರು ಸ್ಕರ್ಟ್‌ನಲ್ಲೇ ಚೆಂದ ಕಾಣುತ್ತಾರೆ. ಉಳಿದಂತೆ ಅರುಣ ಬಾಲರಾಜ್‌, ರಾಜೇಶ್‌ ನಟರಂಗ, ಪ್ರಣಯ ಮೂರ್ತಿ ಹಾಗೂ ಬರುವ ಕೆಲ ಪಾತ್ರಗಳು ಮೋಸ ಮಾಡಿಲ್ಲ. ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ, ಕೆಲ ದೃಶ್ಯಗಳಿಗೆ ಪೂರಕ. ಅಭಿಷೇಕ್‌ ಜಿ.ಕಾಸರಗೋಡು ಕ್ಯಾಮೆರಾದಲ್ಲಿ “ಆಪರೇಷನ್‌’ ನಾರ್ಮಲ್‌.

ಚಿತ್ರ: ಆಪರೇಷನ್‌ ಅಲಮೇಲಮ್ಮ
ನಿರ್ಮಾಣ: ಅಮರೇಜ್‌ ಸೂರ್ಯವಂಶಿ
ನಿರ್ದೇಶನ: ಸುನಿ
ತಾರಾಗಣ: ರಿಷಿ, ಶ್ರದ್ಧಾ ಶ್ರೀನಾಥ್‌, ರಾಜೇಶ್‌ ನಟರಂಗ, ಅರುಣ ಬಾಲರಾಜ್‌, ಸುಮುಕ್ತ, ಪ್ರಣಯ ಮೂರ್ತಿ, ಕಾರ್ತಿಕ್‌, ವಿಜೇತ್‌ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next