ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದೇ ಅತಂತ್ರ ವಿಧಾನಸಭಾ ಚುನಾವಣೆ ಸೃಷ್ಟಿಯಾಗಿರುವ ಬೆನ್ನಲೇ ಬಹುಮತದ ಕೊರತೆ ನಡುವೆಯು ಅಧಿಕಾರ ರಚನೆಗೆ ಮುಂದಾಗಿರುವ ಬಿಜೆಪಿ ನಡೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಬಿಜೆಪಿ ನಡೆಸುವ ಆಪರೇಷನ್ ಕಮಲ ಜಿಲ್ಲೆಯ ಕೈ ಶಾಸಕರ ಮೇಲೆ ನಡೆಯುತ್ತಾ? ಎಂಬ ಚರ್ಚೆಗಳು ಜಿಲ್ಲಾದ್ಯಂತ ಹರಿದಾಡುತ್ತಿದೆ.
ಮೇ 15 ರಂದು ಪ್ರಕಟಗೊಂಡ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಜಿಲ್ಲೆಯಲ್ಲಿ ಕಾಂಗ್ರೆಸ್ ಕೋಟೆಯನ್ನು ಭದ್ರಪಡಿಸಿದ್ದು, ಚಿಂತಾಮಣಿ ಕ್ಷೇತ್ರದಲ್ಲಿ ಮಾತ್ರ ಹಾಲಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಗೆಲ್ಲುವ ಮೂಲಕ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಆದರೆ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್, ಜೆಡಿಎಸ್ ದಿಢೀರ್ ದೋಸ್ತಿಯಾಗಿ ಮೈತ್ರಿ ಸರ್ಕಾರ ರಚನೆಗೆ ಕಾಯತಂತ್ರ ರೂಪಿಸುತ್ತಿರುವ ವೇಳೆಯಲ್ಲಿಯೇ ಬಿಜೆಪಿಗೆ ಅಧಿಕಾರ ರಚನೆಗೆ ರಾಜ್ಯಪಾಲರು ನೀಡಿರುವ ಅವಕಾಶ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇತ್ತ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ನಡೆಸುವ ಅಪರೇಷನ್ ಕಮಲಕ್ಕೆ ಜಿಲ್ಲೆಯ ಕೈ ಶಾಸಕರು ಒಳಾಗುತ್ತಾರೆಯೆ? ಎಂಬ ಚರ್ಚೆ ಜಿಲ್ಲಾದ್ಯಂತ ಬಿಸಿಬಿಸಿಯಾಗಿ ನಡೆಯುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅಪರೇಷನ್ ಕಮಲ ನಡೆಯಲ್ಲ. ಬಿಜೆಪಿ ನಾಯಕರ ಆಟ ಜಿಲ್ಲೆಯಲ್ಲಿ ಏನು ನಡೆಯುವುದಿಲ್ಲ. ಪಕ್ಷದ ಶಾಸಕರು ಪಕ್ಷದ ಜತೆ ಸಂಪರ್ಕದಲ್ಲಿ ಇದ್ದಾರೆ ಎನ್ನುತ್ತಿದ್ದಾರೆ.
ಬಿಜೆಪಿ ನಡೆಸುವ ಅಪರೇಷನ್ ಕಮಲದ ಪಟ್ಟಿಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಟಾರೆಡ್ಡಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಇದ್ದಾರೆ ಎಂದು ಕೇಳಿ ಬರುತ್ತಿರುವ ಉಹಾಪೋಹಾದ ಮಾತುಗಳು ಸಾಕಷ್ಟು ಕುತೂಹಲ ಕೆರಳಿಸಿವೆ. ಆದರೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಮಾಜಿ ಸಿಎಂ ಸಿದ್ದರಾಮಯ್ಯ ನವರ ಅಪ್ತರಾಗಿರುವುದರಿಂದ ಬಿಜೆಪಿ ನಡೆಸುವ ಯಾವುದೇ ರೀತಿಯ ಆಪರೇಷನ್ ಕಮಲಕ್ಕೆ ಬೀಳುತ್ತಾರೆ ಎನ್ನುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೆ ಬಿಜೆಪಿ ನಡೆಸುವ ಅಪರೇಷನ್ ಕಮಲಕ್ಕೆ ಜಿಲ್ಲೆಯ ಕೈ ಶಾಸಕರು ತುತ್ತಾಗಬಹುದೆಂಬ ಆತಂಕ ಕಾಂಗ್ರೆಸ್ ಪಕ್ಷಕ್ಕಿದೆ ಎನ್ನಲಾಗುತ್ತಿದೆ.
ಮೈತ್ರಿ ಸರ್ಕಾರ ಒಲವು ತೋರಿದ್ದ ಸುಧಾಕರ್ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಮಂಗಳವಾರ ಚುನಾವಣೆಯ ಫಲಿತಾಂಶ ಹೊರ ಬಿದ್ದು ಎರಡನೇ ಬಾರಿಗೆ ಶಾಸಕರಾಗಿ ಪುನರಾಯ್ಕೆಗೊಂಡ ವೇಳೆ ಬಿಜೆಪಿ ಪಕ್ಷದ ವಿರುದ್ಧ ತೀವ್ರವಾಗ್ಧಾಳಿ ನಡೆಸಿದ್ದರು.
ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ
ಮಾಡಲಿದೆ ಎಂದಿದ್ದರು. ಆದರೆ ಇದೀಗ ಬಿಜೆಪಿ ಅಧಿಕಾರ ರಚನೆಗೆ ಮುಂದಾಗಿರುವುದು ಜಿಲ್ಲೆಯ ರಾಜಕೀಯ ವಲಯದ ಮೇಲೆ ಏನೇದರೂ ಪರಿಣಾಮ ಬೀರಬಹುದೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.
ಜಿಲ್ಲೆಯ ಯಾವ ಶಾಸಕರು ಕೂಡ ಆಪರೇಷನ್ ಕಮಲಕ್ಕೆ ಬೀಳುವುದಿಲ್ಲ. ಬಿಜೆಪಿಯವರದು ಬರೀ ಭ್ರಮೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳ ಶಾಸಕರು ಕೂಡ ಬೆಂಗ ಳೂರಿನಲ್ಲಿಯೆ ಇದ್ದಾರೆ. ಪಕ್ಷದ ಜೊತೆಗೆ ಸತತ ಸಂಪರ್ಕದಲ್ಲಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ನಿಷ್ಠೆಯಾಗಿದ್ದು, ಬಿಜೆಪಿಯವರ ಆಟ ನಡೆಯದು.
ಕೆ.ಎನ್.ಕೇಶವರೆಡ್ಡಿ ಕಾಂಗ್ರೆಸ್ ಜಿಲ್ಲಾದ್ಯಕ್ಷ