Advertisement

ಪ್ರೆಸ್‌ಕ್ಲಬ್‌ನಲ್ಲಿ ಆಪರೇಷನ್‌ ಹದ್ದು

11:35 AM Nov 29, 2017 | |

ಬೆಂಗಳೂರು: ದಿನವಿಡೀ ಪತ್ರಕರ್ತರಿಂದ ಗಿಜಿಗುಡುವ, ಕಬ್ಬನ್‌ ಪಾರ್ಕ್‌ನಲ್ಲಿನ ಪ್ರೆಸ್‌ಕ್ಲಬ್‌ ಆವರಣ ಮಂಗಳವಾರ ಕೆಲಕಾಲ ಕುತೂಹದ ಕೇಂದ್ರವಾಗಿತ್ತು. ಹಲವು ಸುದ್ದಿಗೋಷ್ಠಿಗಳ ನಡುವೆ ಪ್ರೆಸ್‌ಕ್ಲಬ್‌ ಮೊದಲ ಬಾರಿ ಆಪರೇಷನ್‌ ಒಂದಕ್ಕೆ ಸಾಕ್ಷಿಯಾಯಿತು! ಅದೇ “ಆಪರೇಷನ್‌ ಹದ್ದು’.

Advertisement

ಕ್ಲಬ್‌ ಎದುರಿರುವ ಎರಡು ದೊಡ್ಡ ಮರಗಳಲ್ಲಿ ಆಶ್ರಯ ಪಡೆದಿದ್ದ ಎರಡು ಹದ್ದುಗಳ ರೆಕ್ಕೆ ಏಕಕಾಲಕ್ಕೆ ಅಕಾಸ್ಮಾತಾಗಿ ಗಾಳಿಪಟದ ದಾರಕ್ಕೆ ಸಿಲುಕಿಕೊಂಡಿದೆ. ಹೀಗೆ ರೆಕ್ಕೆ ಸಿಲುಕಿಕೊಂಡು ಅದೆಷ್ಟು ಹೊತ್ತಾಗಿತ್ತೋ, ಹದ್ದುಗಳೆರಡೂ ಎಷ್ಟು ಕಾಲ ಪ್ರಾಣ ಭಯದಲ್ಲಿ ಚಡಪಡಿಸಿದವೋ ತಿಳಿಯದು. ಒಟ್ಟಿನಲ್ಲಿ ಅವೆರಡೂ ಜನರ ಕಣ್ಣಿಗೆ ಬಿದ್ದಾಗ ಮಧ್ಯಾಹ್ನ 12 ಗಂಟೆಯಾಗಿತ್ತು.

ಹದ್ದುಗಳು ರೆಕ್ಕೆ ಬಡಿದಾಡುವ ಸದ್ದು ಕೇಳಿಸಿಕೊಂಡ ಸಾರ್ವಜನಿಕರೊಬ್ಬರು ಮರದ ಮೇಲೆ ನೋಡಿದಾಗ ಹದ್ದುಗಳ ಚಡಪಡಿಸುವುಕೆ ಕಂಡಿದೆ. ಕೂಡಲೇ ಅವರು ಪ್ರೆಸ್‌ಕ್ಲಬ್‌ ಸಿಬ್ಬಂದಿಗೆ ವಿಷಯ ಹೇಳಿದ್ದಾರೆ. ಕ್ಲಬ್‌ ಸಿಬ್ಬಂದಿ ಅಗ್ನಿಶಾಮಕ ದಳದ ಕಚೇರಿಗೆ ಕರೆ ಮಾಡಿ, ವಿಷಯ ತಿಳಿಸಿ ಬೇಗ ಬನ್ನಿ ಎಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕೆಲವೇ ನಿಮಿಷದಲ್ಲಿ ನೂರಾರು ಮಂದಿ ಪ್ರೆಸ್‌ಕ್ಲಬ್‌ ಆವರಣದಲ್ಲಿ ಸೇರಿ, ಮರದಲ್ಲಿ ಪರದಾಡುತ್ತಿದ್ದ ಹದ್ದುಗಳತ್ತ ದೃಷ್ಟಿ ನೆಟ್ಟರು. ಅಷ್ಟೊಂದು ಜನರನ್ನು ಕಂಡ ಹದ್ದುಗಳು ಗಾಬರಿಯಾಗಿ ಮತ್ತಷ್ಟು ವೇಗವಾಗಿ ರೆಕ್ಕೆ ಬಡಿಯಲಾರಂಭಿಸಿದವು.

ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಜತೆಗೂಡಿ ಹದ್ದುಗಳ ರಕ್ಷಣೆ ಕಾರ್ಯ ಆರಂಭಿಸಿದರು. ಮರಕ್ಕೆ ಏಣಿ ಹಾಕಿ, ಉದ್ದದ ಬಿದಿರಿನ ಗಳ ಹಿಡಿದು ರಕ್ಷಣೆಗೆ ನಿಂತ ಸಿಬಂದಿ ಬರೋಬ್ಬರಿ ಒಂದು ಗಂಟೆ ಕಾರ್ಯಾಚರಣೆಯ ನಂತರ ಹದ್ದುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

Advertisement

ನಂತರ ಬಿಬಿಎಂಪಿ ಸಿಬ್ಬಂದಿ ಹದ್ದುಗಳಿಗೆ ಔಷಧೋಪಚಾರ ಮಾಡಿದರು. ಗಾಳಿಪಟದ ದಾರ ರೆಕ್ಕೆಯೊಳಗೆ ಸಿಲುಕಿದ್ದರಿಂದ ರೆಕ್ಕೆಗೆ ಸಣ್ಣ ಗಾಯವಾಗಿದೆ. ಷದೋಪಚಾರ ಮಾಡಿ, ಗಾಯ ಗುಣವಾದ ನಂತರ ಹದ್ದುಗಳನ್ನು ಬಿಡುಗಡೆ ಗೊಳಿಸುವುದಾಗಿ ಸಿಬ್ಬಂದಿ ಹೇಳಿದ್ದಾರೆ.

ಮರದ ಕೊಂಬೆಯಲ್ಲಿ ಮೊದಲು ಒಂದು ಹದ್ದು ಗಾಳಿಪಟದ ದಾರಕ್ಕೆ ಸಿಲುಕಿದ್ದನ್ನು ನೋಡಿದೆವು. ಅದೇ ವೇಳೇ ಪಕ್ಕದ ಮತ್ತೂಂದು ಮರದಲ್ಲಿ ಇನ್ನೊಂದು ಹದ್ದು ಕೂಡ ಗಾಳಿಪಟದ ದಾರಕ್ಕೆ ರೆಕ್ಕಿ ಸಿಲುಕಿಸಿಕೊಂಡಿತ್ತು. ಯಾರೂ ನೋಡದೆ ಹೋಗಿದ್ದರೆ ಹದ್ದುಗಳು ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದವು.
-ರಾಜೇಶ್‌, ಪ್ರೆಸ್‌ಕ್ಲಬ್‌ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next