Advertisement

ಆಪರೇಷನ್‌ ಹಸ್ತ; ಕಾಂಗ್ರೆಸ್‌ ಪ್ರತಿತಂತ್ರ

11:23 PM Apr 24, 2019 | Lakshmi GovindaRaju |

ಬೆಂಗಳೂರು: ಗೋಕಾಕ್‌ ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂದ ಮೇಲೆ ಕಾಂಗ್ರೆಸ್‌ ನಾಯಕರು ಅವರನ್ನು ತಡೆಯುವುದಕ್ಕೆ ಹೆಚ್ಚು ಆದ್ಯತೆ ನೀಡುವ ಬದಲು ಬೇರೆ ಶಾಸಕರು ರಾಜೀನಾಮೆ ನೀಡದಂತೆ ತಡೆಯುವ ಕಸರತ್ತು ನಡೆಸಿದ್ದಾರೆ.

Advertisement

ಅಲ್ಲದೆ, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವಾಗಿ ಆಪರೇಷನ್‌ ಹಸ್ತ ಮಾಡಲೂ ಸಿದ್ದತೆ ಮಾಡಿಕೊಂಡಿದ್ದಾರೆ. ಕಳೆದ ಐದು ತಿಂಗಳಿನಿಂದ ಹಲವಾರು ಬಾರಿ ಪಕ್ಷದ ನಾಯಕರ ಮನವೊಲಿಕೆಯ ನಂತರವೂ ರಮೇಶ್‌ ಜಾರಕಿಹೊಳಿ ತಮ್ಮ ನಿಲುವು ಬದಲಾಯಿಸದೆ ಇರುವುದರಿಂದ ಬಹುತೇಕ ನಾಯಕರು ಅವರಷ್ಟಕ್ಕೆ ಅವರನ್ನು ಬಿಡುವ ಆಲೋಚನೆ ಮಾಡಿದ್ದಾರೆ.

ಆದರೆ, ಅವರು ತಮ್ಮೊಂದಿಗೆ ಬೇರೆಯವರನ್ನೂ ಕರೆದುಕೊಂಡು ಹೋಗುವುದಾಗಿ ಹೇಳಿರುವುದರಿಂದ, ಬೇರೆ ಶಾಸಕರು ಅವರೊಂದಿಗೆ ಹೋಗದಂತೆ ಪಕ್ಷದಲ್ಲಿ ಅವರನ್ನು ಉಳಿಸಿಕೊಳ್ಳಲು ರಾಜ್ಯ ನಾಯಕರು ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ಅಥಣಿ ಶಾಸಕ ಮಹೇಶ್‌ ಕುಮಠಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್‌, ಕಂಪ್ಲಿ ಶಾಸಕ ಗಣೇಶ್‌, ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್‌ ಸೇರಿದಂತೆ ರಮೇಶ ಜಾರಕಿಹೊಳಿ ಜೊತೆಗೆ ಗುರುತಿಸಿಕೊಂಡಿದ್ದ ಶಾಸಕರನ್ನು ಸಂಪರ್ಕಿಸಿ ಅವರು ರಾಜೀನಾಮೆಗೆ ಮುಂದಾಗದಂತೆ ಮನವೊಲಿಕೆ ಪ್ರಯತ್ನ ನಡೆಸಿದ್ದು, ಅವರು ರಮೇಶ ಜೊತೆಗೆ ಹೋಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎನ್ನಲಾಗಿದೆ

. ಅದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ನಿರುಮ್ಮಳರಾಗಿದ್ದಾರೆ ಎನ್ನಲಾಗುತ್ತಿದೆ. ಆಪರೇಷನ್‌ಗೆ ಆಪರೇಷನ್‌: ರಮೇಶ ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂದ ತಕ್ಷಣ ಬಿಜೆಪಿ ನಾಯಕರು ಸಕ್ರಿಯರಾಗಿದ್ದನ್ನು ಗಮನಿಸಿರುವ ರಾಜ್ಯ ಕಾಂಗ್ರೆಸ್‌ ನಾಯಕರು ಚುನಾವಣೆ ಫ‌ಲಿತಾಂಶಕ್ಕೂ ಮುನ್ನವೇ ಆಪರೇಷನ್‌ ಕಮಲ ಮಾಡಿ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನ ನಡೆಸಿದರೆ, ಪ್ರತಿಯಾಗಿ ಬಿಜೆಪಿ ಶಾಸಕರನ್ನು ಆಪರೇಷನ್‌ ಹಸ್ತ ಮಾಡಲು ನಿರ್ಧರಿಸಿದ್ದಾರೆ.

Advertisement

ಈಗಾಗಲೇ ರಾಜ್ಯ ಕಾಂಗ್ರೆಸ್‌ ನಾಯಕರು ಆರು ಜನ ಬಿಜೆಪಿಯ ಶಾಸಕರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕರ ಜೊತೆ ಕಾಂಗ್ರೆಸ್‌ ನಾಯಕರು ಮಾತುಕತೆ ನಡೆಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ರಮೇಶ ಜಾರಕಿಹೊಳಿ ಸೇರಿದಂತೆ ಯಾವುದೇ ಕಾಂಗ್ರೆಸ್‌ ಶಾಸಕರು ಚುನಾವಣೆ ಫ‌ಲಿತಾಂಶಕ್ಕೂ ಮುನ್ನ ರಾಜೀನಾಮೆ ನೀಡಿದರೆ, ಪ್ರತಿಯಾಗಿ ಆಪರೇಷನ್‌ ಹಸ್ತ ನಡೆಸಲು ಕಾಂಗ್ರೆಸ್‌ ನಾಯಕರೂ ಮಾನಸಿಕವಾಗಿ ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದರ ನಡುವೆಯೇ, ರಮೇಶ ಜಾರಕಿಹೊಳಿ ಅವರ ರಾಜೀನಾಮೆ ಪ್ರಹಸನಕ್ಕೆ ಪರ್ಯಾಯವಾಗಿ ಉಪ ಚುನಾವಣೆಗೆ ಕಾಂಗ್ರೆಸ್‌ ನಾಯಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನಲಾಗಿದೆ. ಎರಡು ಕ್ಷೇತ್ರಗಳನ್ನು ಉಳಿಸಿಕೊಂಡರೆ, ಸರ್ಕಾರ ಮತ್ತಷ್ಟು ಗಟ್ಟಿಯಾಗುತ್ತದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದ್ದಾಗಿದೆ.

ಜೆಡಿಎಸ್‌ನಿಂದ ಜಾಣ್ಮೆ ನಡೆ: ರಮೇಶ ಜಾರಕಿಹೋಳಿ ರಾಜೀನಾಮೆ ವಿಚಾರವಾಗಿ ಜಾಣ್ಮೆಯ ನಡೆ ಅನುಸರಿಸುತ್ತಿರುವ ಜೆಡಿಎಸ್‌, ಈ ವಿಚಾರವಾಗಿ ಬಹಿರಂಗ ಹೇಳಿಕೆ ನೀಡದೆ ಇರಲು ನಿರ್ಧರಿಸಿದೆ. ರಮೇಶ ಜಾರಕಿಹೋಳಿ ಕಾಂಗ್ರೆಸ್‌ ಶಾಸಕರಾಗಿದ್ದು, ಇದು ಆ ಪಕ್ಷದ ಆಂತರಿಕ ವಿಷಯವಾಗಿರುವುದರಿಂದ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ ಎಂಬಂತೆ ಮಾಜಿ ಪ್ರಧಾನಿ ದೇವೇಗೌಡ ಅವರು ಬುಧವಾರ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅಥವಾ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಈ ವಿಚಾರವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ, ಈ ವಿಚಾರವಾಗಿ ಜೆಡಿಎಸ್‌ ಪಕ್ಷ ತಟಸ್ಥ ನಿಲುವು ಹೊಂದಲಿದೆ ಎಂದು ಹೇಳಾಗುತ್ತಿದೆ. ರಮೇಶ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ಅವರ ನಡುವಿನ ಗೊಂದಲದಿಂದ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವ ಸಾಧ್ಯತೆ ಇದೆ.

ಹೀಗಾಗಿ, ಈ ವಿಚಾರದ ಮಧ್ಯಪ್ರವೇಶ ಸರಿಯಲ್ಲ ಎಂಬುದನ್ನು ಮುಖ್ಯಮಂತ್ರಿಯವರು ಮನಗಂಡಿದ್ದಾರೆ ಎನ್ನಲಾಗಿದೆ. ಸರ್ಕಾರ ಬಿದ್ದು ಹೋಗುವ ಪರಿಸ್ಥಿತಿ ಬಂದಾಗ ಮಾತ್ರ ಮಧ್ಯಪ್ರವೇಶ ಮಾಡಿ ಸರ್ಕಾರ ಉಳಿಸಿಕೊಳ್ಳಲು ಬೇಕಾದ ಕಾರ್ಯತಂತ್ರವನ್ನು ಜೆಡಿಎಸ್‌ ಈಗಾಗಲೇ ಸಿದ್ದಪಡಿಸಿಕೊಂಡಿದೆ. ಬಿಜೆಪಿಯ ಐದು ಶಾಸಕರು ಮುಖ್ಯಮಂತ್ರಿಯವರ ನೇರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next