ಮಧುಗಿರಿ: ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಇದೀಗ ವೀರಾಪುರ ಗ್ರಾಮದ ಜಮೀನಿನಲ್ಲಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಹಲವು ದಿನಗಳಿಂದ ಹಸು, ಮೇಕೆಗಳ ಮೇಲೆ ದಾಳಿ ನಡೆಸಿ ರೈತರಿಗೆ ಸಾಕಷ್ಟು ನಷ್ಟ ಉಂಟು ಮಾಡಿದ್ದ ಒಂದು ವರ್ಷದ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಚಿರತೆ ಹಾವಳಿಯಿಂದ ಸಾರ್ವಜನಿಕರು, ರೈತರು ಬೇಸತ್ತಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು.
ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ತಾಲೂಕಿನ ಮಿಡಿಗೇಶಿ ಹೋಬಳಿಯ ವೀರಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೋನಿನ ಒಳಗೆ ನಾಯಿಯನ್ನು ಇಟ್ಟು ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕು ವಲಯ ಅರಣ್ಯಾಧಿಕಾರಿ ರವಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಚಿರತೆಯನ್ನು ಬನ್ನೇರುಘಟ್ಟ ವನ್ಯಧಾಮಕ್ಕೆ ಬಿಡಲು ತಯಾರಿ ನಡೆಸಲಾಗಿದೆ ಎನ್ನಲಾಗಿದೆ.