ಮಂಡ್ಯ: “ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಯಡಿಯೂರಪ್ಪನವರ ಜೊತೆಗೆ ಕೈ ಜೋಡಿಸಿದೆ. ತಾಲೂಕಿನ ಅಭಿವೃದ್ಧಿಗೆ 700 ಕೋಟಿ ರೂ.ಅನುದಾನ ನೀಡುವಂತೆ ಕೇಳಿದ್ದು, ಅವರು ಒಂದು ಸಾವಿರ ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಆ ಕಾರಣಕ್ಕಾಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು’ ಎಂದು ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣಗೌಡ ಗುಟ್ಟು ಬಿಟ್ಟುಕೊಟ್ಟರು.
ತಾಲೂಕಿನ ಬೂಕನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಪರೇಷನ್ ಕಮಲ ಮಾಡಿದ್ದು ಬಿ.ಎಸ್.ಯಡಿಯೂರಪ್ಪ ಎಂತಲೂ, ರಾಜೀನಾಮೆಗೂ ಮುನ್ನ ನಡೆದ ಮಾತುಕತೆ ವಿವರವನ್ನು ಬಹಿರಂಗಪಡಿಸಿದರು. ಮೈತ್ರಿ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನವನ್ನು ಹಾಸನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ನಾನೇನೂ ಮಾಡಲಾಗುತ್ತಿರಲಿಲ್ಲ.
ಕೆಲವರು ನನ್ನ ಬಳಿ ಬಂದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಿದ್ದಾರೆ. ನಿಮ್ಮ ಅಭಿಪ್ರಾಾಯ ಏನು ಎಂದು ಕೇಳಿದರು, ನನ್ನನ್ನು ಯಡಿಯೂರಪ್ಪನವರ ಮನೆಗೆ ಸಂಜೆ 5 ಗಂಟೆ ಸಮಯದಲ್ಲಿ ಕರೆದೊಯ್ದರು. ಯಡಿಯೂರಪ್ಪನವರು ನನ್ನನ್ನು ಮಾತನಾಡಿಸಿ, “ಏನಪ್ಪ..! ನನಗೆ ಮುಖ್ಯಮಂತ್ರಿಯಾಗೋ ಅವಕಾಶ ಇದೆ. ನನ್ನ ತಂದೆ ವೀರಭದ್ರಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ, ಕೆ.ಆರ್. ಪೇಟೆ ತಾಲೂಕು ಅಭಿವೃದ್ಧಿಯಾಗಿಲ್ಲ ಎಂದು ಸ್ವಪ್ನದಲ್ಲಿ ಬಂದು ಕಾಡುತ್ತಿದ್ದಾರೆ.
ನೀನು ಕೈ ಜೋಡಿಸಿದರೆ ಕೆ.ಆರ್.ಪೇಟೆ ಅಭಿವೃದ್ಧಿ ಮಾಡೋಣ, ಏನಂತಿಯಾ’ ಎಂದು ಕೇಳಿದರು. ಅದಕ್ಕೆ ನಾನು ಕ್ಷೇತ್ರದ ಅಭಿವೃದ್ಧಿಗಾಗಿ 700 ಕೋಟಿ ರೂ.ಅನುದಾನ ಕೇಳಿದ್ದೆ. ಆದರೆ, ಅವರು 1 ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ಭರವಸೆ ನೀಡಿದರು. ಅದರಂತೆ ನಮ್ಮ ತಾಲೂಕಿನ ಅಭಿವೃದ್ಧಿಗೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ರಾಜೀನಾಮೆಗೂ ಮುನ್ನ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದ ಬಗ್ಗೆ ನಾರಾಯಣಗೌಡರು ಮನದಾಳದ ಮಾತನ್ನು ವಿವರಿಸಿದರು.