Advertisement

ಆಪರೇಷನ್‌ ಕಮಲಕ್ಕೆ ಕೈ-ದಳದಿಂದ ತಿರುಗೇಟು

06:40 AM Nov 12, 2018 | Team Udayavani |

ಬೆಂಗಳೂರು: ಆಪರೇಷನ್‌ ಕಮಲ ಕಾರ್ಯಾಚರಣೆ ಮೂಲಕ ಸಮ್ಮಿಶ್ರ ಸರ್ಕಾರದ ಬುಡ ಅಲ್ಲಾಡಿಸಲು ಮುಂದಾದ ಬಿಜೆಪಿಗೆ ರಾಜಕೀಯವಾಗಿಯೇ ತಿರುಗೇಟು ನೀಡಲು ಕಾಂಗ್ರೆಸ್‌-ಜೆಡಿಎಸ್‌ ಒಗ್ಗೂಡಿ ಆ್ಯಂಬಿಡೆಂಟ್‌ ಪ್ರಕರಣ “ಅಸ್ತ್ರ’ ಪ್ರಯೋಗ ಮಾಡಿತಾ ಎಂಬ ಪ್ರಶ್ನೆ ಮೂಡಿದೆ.

Advertisement

ಆಪರೇಷನ್‌ ಕಮಲ ಕಾರ್ಯಾಚರಣೆಗೆ ಬಿ.ಎಸ್‌.ಯಡಿಯೂರಪ್ಪ ಅವರಿಗೆ  ಒತ್ತಾಸೆಯಾಗಿ ನಿಂತವರು ಶ್ರೀರಾಮುಲು. ರಾಜಕೀಯವಾಗಿ ಶ್ರೀರಾಮುಲು ಹಿಂದಿನ ಪ್ರೇರಕ ಶಕ್ತಿ ಜನಾರ್ದನರೆಡ್ಡಿ. ಹೀಗಾಗಿ, ಮೂಲಕ್ಕೆ ಕುತ್ತು ತಂದರೆ ತಂಟೆಗೆ ಬರುವುದಿಲ್ಲ ಎಂಬ ತಂತ್ರಗಾರಿಕೆ ಇದರ ಹಿಂದಿದೆ ಎಂದು ಹೇಳಲಾಗಿದೆ.

ಈ ಮೂಲಕ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಿದರೆ ಆ ಕಾರ್ಯಾಚರಣೆಯ ಮುಂಚೂಣಿ ವಹಿಸುವವರ ಹಳೆಯ ಕೇಸ್‌ ರೀ ಓಪನ್‌ ಆಗಲಿದೆ ಎಂಬ ಎಚ್ಚರಿಕೆ ಸಂದೇಶ ಸಹ ರವಾನಿಸಲಾಗಿದೆ. ಈಗಾಗಲೇ ಬಿಜೆಪಿಯ ಆಪರೇಷನ್‌ ಕಮಲ ಕಾರ್ಯಾಚರಣೆಗೆ ನೆರವು ನೀಡಿದವರಿಗೂ ಪರೋಕ್ಷವಾಗಿ ಬಿಸಿ ಮುಟ್ಟಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೈ ಹಾಕಿದ ವೇಳೆಯೇ ಆ್ಯಂಬಿಡೆಂಟ್‌ ಪ್ರಕರಣಕ್ಕೆ ಜೀವ ಬರಬೇಕಿತ್ತು. ಆದರೆ, ಕೆಲವೊಂಂದು ಕಾರಣಗಳಿಂದಾಗಿ ಆಗಿರಲಿಲ್ಲ. ಬಳ್ಳಾರಿ ಉಪ ಚುನಾವಣೆ ಸಂದರ್ಭದಲ್ಲೂ ನವೆಂಬರ್‌ 1 ಕ್ಕೆ ರೆಡ್ಡಿ ಮಾಡಿರುವ ಅಕ್ರಮದ ಬಾಂಬ್‌ ಸಿಡಿಯಲಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಮುನ್ಸೂಚನೆ ನೀಡಿದ್ದರು. ಆದರೆ, ಆಗ ಮತ್ತೆ ಸ್ಥಗಿತವಾಯಿತು.ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕುರಿತು ಜನಾರ್ದನರೆಡ್ಡಿ ಆಡಿದ ಮಾತು ಕೊನೆಗೂ ಮುಳುವಾಯಿತು ಎಂದು ಹೇಳಲಾಗುತ್ತಿದೆ.

ಅತ್ತ ಕೇಂದ್ರ ಸರ್ಕಾರ ಇಡಿ, ಸಿಬಿಐ ಮೂಲಕ ತೊಂದರೆ ಕೊಡುತ್ತಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಬಹಿರಂಗವಾಗಿಯೇ ಹೇಳಿದ್ದಾರೆ. ಹೀಗಿರುವಾಗ ನಾವ್ಯಾಕೆ ಜನಾರ್ದನರೆಡ್ಡಿ ವಿರುದ್ಧದ ಪ್ರಕರಣ ಅಸ್ತ್ರವಾಗಿಸಿಕೊಳ್ಳಬಾರದು. ಪೊಲೀಸರು ಸಂಗ್ರಹಿಸಿರುವ ಮಾಹಿತಿಯಲ್ಲಿ ಪ್ರಕರಣದಲ್ಲಿ ಜನಾರ್ದನರೆಡ್ಡಿ ಪಾತ್ರವಿರಬಹುದು. ಹೀಗಾಗಿ, ನೋಟೀಸ್‌ ಜಾರಿ ಮಾಡಲಾಗಿದೆ ಎಂಬುದು ಕಾಂಗ್ರೆಸ್‌ -ಜೆಡಿಎಸ್‌ ನಾಯಕರ ವಾದ.

Advertisement

ಜನಾರ್ದನರೆಡ್ಡಿ ಪ್ರಕರಣ ಒಂದೇ ಅಲ್ಲ. ಬಿಜೆಪಿ ನಾಯಕರ ವಿರುದ್ಧ ಈಗಾಗಲೇ ದಾಖಲಾಗಿರುವ ಹಲವಾರು ಪ್ರಕರಣಗಳಿಗೂ ಜೀವ ಬರುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆ ವೇಳೆಗೆ  ಈ ಹಿಂದೆ ಲೋಕಾಯುಕ್ತ, ಸಿಸಿಬಿ, ಎಸಿಬಿಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

ಈ ಎಲ್ಲ ವಿದ್ಯಮಾನಗಳು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಮುಜುಗರ ಉಂಟುಮಾಡಲಿದೆ ಎನ್ನಲಾಗಿದ್ದು ರಾಜಕೀಯವಾಗಿ ಜಿದ್ದಾಜಿದ್ದಿಗೂ ಇದು ಕಾರಣವಾಗಲಿದೆಯಾ ಕಾದು ನೋಡಬೇಕಾಗಿದೆ.

ಏಕೆಂದರೆ, ಸಮ್ಮಿಶ್ರ ಸರ್ಕಾರ ಉರುಳಿಸಲು ಕಿಂಗ್‌ಪಿನ್‌ಗಳ ನೆರವು ಪಡೆಯಲಾಗುತ್ತಿದೆ ಎಂದು ಮುಖ್ಯಮಂತ್ರಿಯವರು ಆರೋಪಿಸಿದ್ದರು. ಆದಾದ ನಂತರ ಹಲವರ ಮೇಲೆ ಪ್ರಕರಣ ದಾಖಲಾಗಿದ್ದನ್ನು  ಇಲ್ಲಿ ಸ್ಮರಿಸಬಹುದು.

ಈ ಮಧ್ಯೆ, ಜನಾರ್ದನರೆಡ್ಡಿ ಪ್ರಕರಣ ಬಿಜೆಪಿಯ ಕೆಲವು ನಾಯಕರಲ್ಲೂ ಆತಂಕಮೂಡಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಮತ್ತೆ ಎಲ್ಲಿ ಜೀವ ಬರುತ್ತೋ ಎಂದು ಆಂತರಿಕವಾಗಿ  ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಜತೆ ಮೃಧು ಧೋರಣೆ ತಾಳುತ್ತಿದ್ದಾರೆ ಎಂದು ಹೇಳಲಾಗಿದೆ.

ಜೈಲು-ಬೇಲು ಪ್ರಹಸನಕ್ಕೆ ಚಾಲನೆ
ಜನಾರ್ದನರೆಡ್ಡಿ ಬಂಧನದ ಮೂಲಕ ರಾಜ್ಯದಲ್ಲಿ ಮತ್ತೆ ಜೈಲು-ಬೇಲು ಪ್ರಹಸನಕ್ಕೆ ಚಾಲನೆ ದೊರೆತಂತಾಗಿದೆ. ಮೇಲ್ನೋಟಕ್ಕೆ ಬಿಜೆಪಿಯನ್ನು ರಾಜಕೀಯವಾಗಿ ಮಣಿಸಲು  ಅಸ್ತ್ರ ಎಂದು ಹೇಳಲಾಗುತ್ತಿದೆಯಾದರೂ ಆ್ಯಂಬಿಡೆಂಟ್‌ ಕಂಪನಿ ಮಾಲೀಕನಿಗೆ ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆಯಲ್ಲಿ ಸಹಾಯ ಮಾಡಲು 57 ಕೆಜಿ ಚಿನ್ನದ ಗಟ್ಟಿ ಪಡೆದ ಆರೋಪ ಪ್ರಕರಣದಲ್ಲಿ ಜನಾರ್ದನರೆಡ್ಡಿ ಪಾತ್ರ ಕುರಿತು ಸಾಕಷ್ಟು ಆಂತರಿಕ ತನಿಖೆ ನಡೆಸಿ ಕೆಲವೊಂದು ಮಾಹಿತಿ ಸಂಗ್ರಹಿಸಿಯೇ  ಕೈ ಇಡಲಾಗಿದೆ ಎಂದು ಹೇಳಲಾಗಿದೆ.

– ಎಸ್‌. ಲಕ್ಷ್ಮಿನಾರಾಯಣ 

Advertisement

Udayavani is now on Telegram. Click here to join our channel and stay updated with the latest news.

Next