ಬಹ್ರೈಚ್ : ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ಎಂಟು ಮಂದಿಯ ಸಾವಿಗೆ ಕಾರಣವಾಗಿ ಕನಿಷ್ಠ 15 ಜನರನ್ನು ಗಾಯಗೊಳಿಸಿದ ತೋಳಗಳ ಗುಂಪನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ “ಆಪರೇಷನ್ ಭೇಡಿಯಾ” ಎಂಬ ಬೃಹತ್ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇದುವರೆಗೆ 4 ತೋಳಗಳನ್ನು ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ತೋಳಗಳು ಇನ್ನೂ ಅಡಗಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿಸಿದ್ದು, ಅವುಗಳನ್ನೂ ಸೆರೆಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಗುರುವಾರ ಅರಣ್ಯ ಅಧಿಕಾರಿಗಳು ಒಂದು ತೋಳವನ್ನು ಸೆರೆಹಿಡಿದು ವನ್ಯ ಪ್ರಾಣಿಗಳ ಆಶ್ರಯಧಾಮಕ್ಕೆ ವರ್ಗಾಯಿಸಿದ್ದಾರೆ.
ಕಳೆದ 45 ದಿನಗಳಿಂದ ನಡೆದ ಅಟ್ಟಹಾಸ ಗೈದ ತೋಳಗಳು ನಡೆಸಿದ ಸರಣಿ ದಾಳಿಗಳಲ್ಲಿ ಮೆಹ್ಸಿ ತಹಸಿಲ್ನ ವಿವಿಧ ಗ್ರಾಮಗಳಲ್ಲಿ ಬಲಿಯಾದ ಎಂಟು ಜನರಲ್ಲಿ ಆರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದ್ದಾರೆ.
“ಆಪರೇಷನ್ ಭೇಡಿಯಾ” ಅಡಿಯಲ್ಲಿ, ಬಹ್ರೈಚ್ ಅರಣ್ಯ ಇಲಾಖೆಯು ತೋಳಗಳನ್ನು ಸೆರೆಹಿಡಿಯಲು ಡ್ರೋನ್ ಕೆಮರಾಗಳು ಮತ್ತು ಥರ್ಮಲ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾರ್ಯಾಚರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜಿಲ್ಲಾಡಳಿತವು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರವನ್ನು ಘೋಷಿಸಿದೆ.