Advertisement

ಕವಡಿಮಟ್ಟಿಯಲ್ಲಿ ಬಿಸಿಯೂಟ ಅಡುಗೆ ಕೋಣೆ ಉದ್ಘಾಟನೆ

11:16 AM Nov 02, 2021 | Shwetha M |

ಮುದ್ದೇಬಿಹಾಳ: ಕವಡಿಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿಯವರು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಡಿ ನಿರ್ಮಿಸಿರುವ ಬಿಸಿಯೂಟದ ಅಡುಗೆ ಕೋಣೆಯನ್ನು ಉದ್ಘಾಟಿಸಿದರು.

Advertisement

ಇದಾದ ಮೇಲೆ ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದಿಂದ ಕೊಡ ಮಾಡುತ್ತಿರುವ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಿದರು. ಈ ವೇಳೆ ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಾಲೋಚನಾ ಸಭೆ ನಡೆಸಿ, ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡ ಶಾಸಕರು ಗ್ರಾಮೀಣ ಮಕ್ಕಳು ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಸರ್ಕಾರಿ ಶಾಲೆಯ ಶಿಕ್ಷಕರು ಪ್ರತಿಭಾವಂತರಿದ್ದು ಅವರ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಕರು ಎಲ್ಲ ಮಕ್ಕಳಿಗೆ ಹೆಚ್ಚಿನ ಕಾಳಜಿಯಿಂದ ವಿದ್ಯೆ ಕಲಿಸುವ ಮೂಲಕ ಸರ್ಕಾರಿ ಶಾಲೆಗಳತ್ತ ಆಕರ್ಷಣೆ ಮೂಡಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಂವಾದದಲ್ಲಿ ಕೇಳಿ ಬಂದ ವಿದ್ಯಾರ್ಥಿಗಳ ಮಾತುಗಳನ್ನು ಮೆಚ್ಚಿ ಅವರನ್ನು ಪ್ರೋತ್ಸಾಹಿಸಿದ ಶಾಸಕರು ಭವಿಷ್ಯದಲ್ಲಿ ಏನಾಗಬೇಕು ಎನ್ನುವ ಕನಸನ್ನು ಈಗಿನಿಂದಲೇ ಕಂಡು, ಆ ಕನಸು ನನಸಾಗುವ ನಿಟ್ಟಿನಲ್ಲಿ ಶ್ರಮ ವಹಿಸಿದರೆ ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗುತ್ತದೆ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಿಸುವ ತಮ್ಮ ಶಿಕ್ಷಣ ದಾಸೋಹವನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, ನಾವು ಕೊಡುವ ನೋಟ್‌ಬುಕ್‌, ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರೆ ಅದರಲ್ಲೇ ನಮ್ಮ ಸೇವೆಯ ಸಾರ್ಥಕತೆ ಇದೆ ಎಂದು ಭಾವಿಸುವುದಾಗಿ ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ಧುರೀಣರಾದ ಬಸವರಾಜ ಗುಳಬಾಳ, ಅಪ್ಪುಗೌಡ ಮೈಲೇಶ್ವರ, ಎಸ್ಡಿಎಂಸಿ ಅಧ್ಯಕ್ಷ ಬಸಲಿಂಗಪ್ಪ ಮೇಟಿ, ಪಿಕೆಪಿಎಸ್‌ ಕಾರ್ಯದರ್ಶಿ ಬಸನಗೌಡ ಪಾಟೀಲ, ಪಿಕೆಪಿಎಸ್‌ ನಿರ್ದೇಶಕ ಮಲ್ಲೇಶಪ್ಪ ಹಡಪದ, ಮುಖಂಡರಾದ ಬಸವರಾಜ ಹೊಕ್ರಾಣಿ, ಚಂದಾಲಿಂಗ ಹಂಡರಗಲ್ಲ, ಕಾಂತಯ್ಯ ಮಠ, ಶಾಲೆ ಮುಖ್ಯಾಧ್ಯಾಪಕರು, ಶಿಕ್ಷಕರು, ಪಾಲಕರು ಸೇರಿ ಹಲವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next