Advertisement

ಆರಂಭಿಕರ ಆರೋಗ್ಯಕರ ಸ್ಪರ್ಧೆ

09:06 AM Jul 31, 2017 | |

ಗಾಲೆ: ಗಾಲೆ ಟೆಸ್ಟ್‌ ಪಂದ್ಯವನ್ನು ಭಾರತ ದಾಖಲೆ ಅಂತರದಿಂದ ಗೆದ್ದ ಸಂಭ್ರಮ ದಲ್ಲಿದೆ. ಸಹಜವಾಗಿಯೇ ಇದು ಸಂತಸ ಅರಳುವ ಸಮಯ. ಆದರೆ ಮುಂದಿನ ಟೆಸ್ಟ್‌ ಪಂದ್ಯ ಇನ್ನು ನಾಲ್ಕೇ ದಿನಗಳಲ್ಲಿ ಆರಂಭವಾಗಲಿದೆ ಎನ್ನುವಾಗ ಭಾರತದ ಪಾಳೆಯದಲ್ಲಿ ಸಹಜವಾಗಿಯೇ ತಲೆನೋವು ಕಾಣಿಸಿಕೊಂಡಿದೆ. ಇದು ಅಂತಿಮ ಹನ್ನೊಂದರ ಆಯ್ಕೆಗೆ ಸಂಬಂಧಿಸಿದ್ದು. ಅದ ರಲ್ಲೂ ಮುಖ್ಯವಾಗಿ ಆರಂಭಿಕರ ಆಯ್ಕೆ ಜಟಿಲಗೊಂಡಿರುವ ಬಗ್ಗೆ ನಾಯಕ ಕೊಹ್ಲಿ, ಕೋಚ್‌ ರವಿಶಾಸ್ತ್ರಿ ಸೇರಿದಂತೆ ತಂಡದ ಆಡಳಿತ ಮಂಡಳಿ ತಲೆ ಕೆಡಿಸಿಕೊಳ್ಳಬೇಕಿದೆ.

Advertisement

ಗಾಲೆ ಟೆಸ್ಟ್‌ ಪಂದ್ಯದಲ್ಲಿ ಆರಂಭಿಕರಾಗಿ ಇಳಿದ ಶಿಖರ್‌ ಧವನ್‌ ಮತ್ತು ಅಭಿನವ್‌ ಮುಕುಂದ್‌ ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಧವನ್‌ ಮೊದಲ ಇನ್ನಿಂಗ್ಸ್‌ ನಲ್ಲಿ 190 ರನ್‌ ಬಾರಿಸಿದರೆ, ಮುಕುಂದ್‌ 6 ವರ್ಷಗಳ ಬಳಿಕ ಅರ್ಧ ಶತಕವೊಂದನ್ನು ದಾಖಲಿಸಿ ದ್ದಾರೆ (81). ವನ್‌ಡೌನ್‌ ಬ್ಯಾಟ್ಸ್‌ ಮನ್‌ ಚೇತೇಶ್ವರ್‌ ಪೂಜಾರ, ನಾಯಕ ವಿರಾಟ್‌ ಕೊಹ್ಲಿ ಕೂಡ ಶತಕ ಬಾರಿಸಿದ್ದಾರೆ. ಒಟ್ಟಾರೆ ಭಾರತದ ಇಡೀ ಅಗ್ರ ಕ್ರಮಾಂಕ ಪ್ರಚಂಡ ಫಾರ್ಮ್ ಪ್ರದರ್ಶಿಸಿದೆ. ಅಲ್ಲದೇ ಭಾರತ ಭರ್ಜರಿ ಜಯ ದಾಖಲಿಸಿದೆ.

ಇದೊಂದು ಆರೋಗ್ಯಕರ ಸ್ಪರ್ಧೆ 
ಸಹಜವಾಗಿಯೇ ಗೆಲುವಿನ ಕಾಂಬಿನೇಶನ್‌ನಲ್ಲಿ ಯಾರೂ ಬದಲಾವಣೆ ಮಾಡಲು ಮುಂದಾಗುವುದಿಲ್ಲ. ಆದರೆ ಮತ್ತೂಬ್ಬ ಆರಂಭಕಾರ, ಜ್ವರದಿಂದ ಗಾಲೆ ಟೆಸ್ಟ್‌ ನಿಂದ ಹೊರಗುಳಿದಿದ್ದ ಕೆ.ಎಲ್‌. ರಾಹುಲ್‌ ಚೇತರಿಸಿಕೊಂಡಿರುವುದರಿಂದ 2ನೇ ಟೆಸ್ಟ್‌ ಆಡಲಿಳಿಯುವುದು ಖಾತ್ರಿ. ಆದರೆ ಇವರಿ ಗಾಗಿ ಬದಲಾವಣೆಯೊಂದನ್ನು ಮಾಡಲೇ ಬೇಕಾಗಿರುವುದು ದೊಡ್ಡ ಸಮಸ್ಯೆ! 

“ಹೌದು, ಇದೊಂಥರ ಸಂದಿಗ್ಧ ಪರಿಸ್ಥಿತಿ. ತಂಡದ ಎಲ್ಲ ಆರಂಭಿಕರೂ ಅಮೋಘ ಫಾರ್ಮ್ನಲ್ಲಿದ್ದಾರೆ. ಆದರೆ ಇಬ್ಬರಿಗಷ್ಟೇ ಅವಕಾಶ ನೀಡಲು ಸಾಧ್ಯ. ಹೀಗಾಗಿ ಆರಂಭಿಕರ ಆಯ್ಕೆ ಎನ್ನುವುದು ಆರೋಗ್ಯ ಕರ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ತಂಡದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳ ವಣಿಗೆ…’ ಎಂದು ನಾಯಕ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

“ಮುಂದಿನ ಟೆಸ್ಟ್‌ ಪಂದ್ಯಕ್ಕೆ ಯಾರೇ ಇಬ್ಬರು ಆರಂಭಿಕರಾಗಿ ಆಯ್ಕೆಯಾದರೂ ಮೂರನೆಯವರು ಖಂಡಿತವಾಗಿಯೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನ್ನದು…’ ಎಂದಿದ್ದಾರೆ ಕೊಹ್ಲಿ. ಎಲ್ಲರೂ ಭಾವಿಸುವಂತೆ ಅಭಿನವ್‌ ಮುಕುಂದ್‌ ಬದಲು ಕೆ.ಎಲ್‌. ರಾಹುಲ್‌ ದ್ವಿತೀಯ ಟೆಸ್ಟ್‌ನಲ್ಲಿ ಆಡಲಿಳಿಯಲಿದ್ದಾರೆ.

Advertisement

ಮೆಲ್ಬರ್ನ್ ಪ್ರೋಗ್ರಾಂ: ಧವನ್‌
ಗಾಲೆಯಲ್ಲಿ ಭಾರತದ ಇನ್ನಿಂಗ್ಸ್‌ ಆರಂ ಭಿಸಿದವರಿಬ್ಬರೂ ಬದಲಿ ಆಟಗಾರ ರೆಂಬುದು ತಿಳಿದ ವಿಷಯ. ಮುರಳಿ ವಿಜಯ್‌ ಗಾಯಾಳಾದ್ದರಿಂದ ಶಿಖರ್‌ ಧವನ್‌ ಕರೆ ಪಡೆದರೆ, ರಾಹುಲ್‌ ಅನಾರೋಗ್ಯ ಕ್ಕೊಳಗಾದ್ದರಿಂದ ಮುಕುಂದ್‌ ಅವಕಾಶ ಗಿಟ್ಟಿಸಿದರು. ಈಗ ರಾಹುಲ್‌ ಮರಳಿದ್ದಾರೆ, ಮುಕುಂದ್‌ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಹೊರಗುಳಿಯುವುದು ಅನಿವಾರ್ಯ. ಕಾರಣ, ರಾಹುಲ್‌ “ಮೊದಲ ಆಯ್ಕೆ’ಯ ಆರಂಭಕಾರ. ನಾಳೆ ಮುರಳಿ ವಿಜಯ್‌ ಗುಣಮುಖರಾಗಿ ವಾಪಸಾದರೆ ಆಗ ಶಿಖರ್‌ ಧವನ್‌ ಜಾಗ ಖಾಲಿ ಮಾಡಲೇಬೇಕಾಗುತ್ತದೆ. ಅಲ್ಲದೇ ರಣಜಿ ಹೀರೋಗಳಾದ ಗುಜರಾತಿನ ಪ್ರಿಯಾಂಕ್‌ ಪಾಂಚಾಲ್‌, ಸಮಿತ್‌ ಗೋಹೆಲ್‌ ಮೊದಲಾದವರು “ವೇಟಿಂಗ್‌ ಲಿಸ್ಟ್‌’ನಲ್ಲಿದ್ದಾರೆ.

ಅಕಸ್ಮಾತ್‌ ಶಿಖರ್‌ ಧವನ್‌ ಶ್ರೀಲಂಕಾ ಪ್ರವಾಸಕ್ಕೆ ಕರೆ ಪಡೆಯದೇ ಇದ್ದಲ್ಲಿ ಕುಟುಂಬ ಸಮೇತ ಹೆಂಡತಿಯ ತವರಾದ ಮೆಲ್ಬರ್ನ್ಗೆ ಹೋಗಿ ಸುತ್ತಾಡುವ ಯೋಜನೆ ಹಾಕಿಕೊಂಡಿ ದ್ದರು. ಏಕದಿನ ಸರಣಿಯ ವೇಳೆ ತಂಡವನ್ನು ಕೂಡಿಕೊಳ್ಳುವುದು ಇವರ ಗುರಿಯಾಗಿತ್ತು. ಆದರೀಗ ಧವನ್‌ ಲಂಕಾ ಪ್ರವಾಸದಲ್ಲೇ ಪೂರ್ಣಾವಧಿ ಕಳೆಯಬೇಕಿದೆ. 

ಈಜು ಕೊಳದಲ್ಲಿ ಕೊಹ್ಲಿ-ರಾಹುಲ್‌
ಗಾಲೆ: ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್‌ ಪಂದ್ಯವನ್ನು ನಾಲ್ಕೇ ದಿನದಲ್ಲಿ ಗೆದ್ದ ಭಾರತದ ಕ್ರಿಕೆಟಿಗರು ರವಿವಾರ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದರು. ನಾಯಕ ವಿರಾಟ್‌ ಕೊಹ್ಲಿ ಮತ್ತು ಆರಂಭಕಾರ ಕೆ.ಎಲ್‌. ರಾಹುಲ್‌ ಈಜು ಕೊಳದಲ್ಲಿ ಹೆಚ್ಚಿನ ಸಮಯವನ್ನು ಕಳೆದರು. ಈ ಚಿತ್ರವನ್ನು ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

“ಚಿಲ್ಲಿಂಗ್‌ ಬೈ ದಿ ಪೂಲ್‌. ಗುಡ್‌ ಟೈಮ್ಸ್‌…’ ಎಂದು ವಿರಾಟ್‌ ಕೊಹ್ಲಿ ಚಿತ್ರದ ಜತೆ ಪೋಸ್ಟ್‌ ಮಾಡಿದ್ದಾರೆ. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 17ನೇ ಹಾಗೂ ವಿದೇಶದಲ್ಲಿ 5ನೇ ಶತಕ ಬಾರಿಸುವ ಮುಲಕ ಕಪ್ತಾನನ ಆಟವಾಡಿದರು. ನಾಯಕ ನಾಗಿ ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಯನ್ನೂ ಮಾಡಿದರು. ಆದರೆ ಜ್ವರದಿಂದಾಗಿ ಕೆ.ಎಲ್‌. ರಾಹುಲ್‌ ಗಾಲೆ ಟೆಸ್ಟ್‌ ಪಂದ್ಯದಿಂದ ಹೊರಗುಳಿಯ ಬೇಕಾಯಿತು. ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ರಾಹುಲ್‌ ಆಡಲಿದ್ದು, ಇವರಿಗಾಗಿ ಅಭಿನವ್‌ ಮುಕುಂದ್‌ ಜಾಗ ಬಿಡುವ ಸಾಧ್ಯತೆ ಹೆಚ್ಚಿದೆ.

ಧವನ್‌ ವೀಡಿಯೋ ಗೇಮ್‌
ಗಾಲೆ ಟೆಸ್ಟ್‌ ಪಂದ್ಯದಲ್ಲಿ ಅಮೋಘ 190 ರನ್‌ ಬಾರಿಸಿ ಪಂದ್ಯಶ್ರೇಷ್ಠರೆನಿಸಿಕೊಂಡ ಎಡಗೈ ಆರಂಭಕಾರ ಶಿಖರ್‌ ಧವನ್‌ ರವಿವಾರದ ಸಮಯವನ್ನು ವೀಡಿಯೋ ಗೇಮ್‌ಗಾಗಿ ಮೀಸಲಿಟ್ಟು ಇಲ್ಲಿಯೂ ತಮ್ಮ “ಫಾರ್ಮ್’ ಪ್ರದರ್ಶಿಸಿದರು. ಇಲ್ಲಿ “ಫಿಫಾ’ ಗೇಮ್‌ ಆಡಿ ಸಹ ಆಟಗಾರರನ್ನು ಪರಾಭವಗೊಳಿಸಿದರು.

ರೋಹಿತ್‌ ಶರ್ಮ ಟ್ವೀಟ್‌ ಮಾಡಿದ ಚಿತ್ರದಲ್ಲಿ ಶಿಖರ್‌ ಧವನ್‌ ಜತೆಗಾರರಾದ ಚೇತೇಶ್ವರ್‌ ಪೂಜಾರ ಮತ್ತು ಕೆ.ಎಲ್‌. ರಾಹುಲ್‌ ವಿರುದ್ಧ ಗೆಲುವಿನ ಸಂಭ್ರಮ ಆಚರಿಸುತ್ತಿದ್ದ ದೃಶ್ಯವನ್ನು ಕಾಣಬಹುದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next