ಕಾನ್ಪುರ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಅಂತಿಮ ದಿನದಾಟ ಇಂದು ನಡೆಯುತ್ತಿದೆ. ನ್ಯೂಜಿಲ್ಯಾಂಡ್ ತಂಡವು ಗೆಲುವಿಗೆ 284 ರನ್ ಗಳಿಸಬೇಕಿದೆ. ಈ ನಡುವೆ ಎರಡನೇ ಪಂದ್ಯಕ್ಕೆ ವಿರಾಟ್ ಕೊಹ್ಲಿ ತಂಡಕ್ಕೆ ಆಗಮಿಸುವ ಕಾರಣ ಹಲವು ಬದಲಾವಣೆಗಳು ಸಾಧ್ಯತೆಯಿದೆ.
ವಿರಾಟ್ ಬದಲಿಗೆ ಸ್ಥಾನ ಪಡೆದ ಶ್ರೇಯಸ್ ಅಯ್ಯರ್ ಭರ್ಜರಿ ಆಟವಾಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಅಯ್ಯರ್ ಎರಡನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈಬಿಡುವುದು ಕಷ್ಟಕರವಾಗಿದೆ.
ಆದರೆ ನಾಯಕ ವಿರಾಟ್ ಕೊಹ್ಲಿ ಆಗಮಿಸುವ ಕಾರಣ ಅವರಿಗೆ ಒಂದು ಸ್ಥಾನದ ತೆರವು ಆಗಲೇ ಬೇಕಿದೆ. ಈ ಬಗ್ಗೆ ಮಾತನಾಡಿರುವ ಮಾಜಿ ಆಟಗಾರ ವಾಸಿಂ ಜಾಫರ್, “ಮಯಾಂಕ್ ಅಗರ್ವಾಲ್ ಅಥವಾ ಅಜಿಂಕ್ಯ ರಹಾನೆ ರನ್ನು ಮುಂದಿನ ಕೈಬಿಡಬೇಕಾಗಬಹುದು. ಒಂದು ವೇಳೆ ಮಯಾಂಕ್ ಅಗರ್ವಾಲ್ ರನ್ನು ಕೈಬಿಟ್ಟರೆ, ಆರಂಭಿಕರಾಗಿ ಶುಭ್ಮನ್ ಗಿಲ್ ಜೊತೆಗೆ ವೃದ್ಧಿಮಾನ್ ಸಾಹಾರನ್ನು ಆಡಿಸಬಹುದು” ಎಂದಿದ್ದಾರೆ.
ಇದನ್ನೂ ಓದಿ:ಬೈಕ್ ಅಪಘಾತ: ಗಾಯಗೊಂಡ ಸ್ಪಿನ್ ದಿಗ್ಗಜ ಶೇನ್ ವಾರ್ನ್
ಮಯಾಂಕ್ ಅಗರ್ವಾಲ್ ಅವರು ಕಾನ್ಪುರ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ವಿಫಲರಾಗಿದ್ದರು. ನಾಯಕ ವಿರಾಟ್ ಕೊಹ್ಲಿ ಮೊದಲ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದರು.