Advertisement

ಸಾವಯವ, ಸಿರಿಧಾನ್ಯ ಮೇಳಕ್ಕೆ ತೆರೆ

06:44 AM Jan 21, 2019 | Team Udayavani |

ಬೆಂಗಳೂರು: ಕೋಟ್ಯತರ ರೂ. ವಹಿವಾಟು, ಲಕ್ಷಾಂತರ ಗ್ರಾಹಕರ ಭೇಟಿ, ಸಾವಿರಾರು ರೈತರು, ಉದ್ಯಮಿಗಳ ಪಾಲ್ಗೊಳ್ಳುವಿಕೆ ಹಾಗೂ ಸಾವಿರಾರು ಮೈಟ್ರಿಕ್‌ ಟನ್‌ ಸಿರಿಧಾನ್ಯ ಖರೀದಿಸುವ ಕುರಿತ  ಒಪ್ಪಂದಗಳ ಮೂಲಕ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳಕ್ಕೆ ಭಾನುವಾರ ತೆರೆಬಿತ್ತು.

Advertisement

ಜ.18ರಿಂದ 20ರವರೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ಮೂರು ದಿನಗಳ ಮೇಳದಲ್ಲಿ 300 ಬಿಟುಬಿ ಸಭೆಗಳು, ನಿರಂತರ ಉಪನ್ಯಾಸ, ಸಂವಾದಗಳು ನಡೆದವು. ದೇಶಿ, ವಿದೇಶಿ ಕಂಪನಿಗಳು 67 ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಮೂಲಕ 56,511 ಮೆಟ್ರಿಕ್‌ ಟನ್‌ ಸಿರಿಧಾನ್ಯಗಳ ಖರೀದಿಸಲು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಒಟ್ಟಾರೆ ಮೇಳದಲ್ಲಿ 240 ಕೋಟಿ ರೂ. ವಹಿವಾಟು ನಡೆದಿದೆ ಎಂದು ಕೃಷಿ ಇಲಾಖೆ ಆಯುಕ್ತ ಡಾ.ಕೆ.ಜಗದೀಶ್‌ ತಿಳಿಸಿದ್ದಾರೆ.

1.5 ಲಕ್ಷ ಹೆಕ್ಟೇರ್‌ಗೆ ಹೆಚ್ಚಿಸುವ ಗುರಿ: ಸದ್ಯ ರಾಜ್ಯದಲ್ಲಿರುವ 121 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಇದ್ದು, ಅದರಲ್ಲಿ 81 ಲಕ್ಷ ಹೆಕ್ಟೇರ್‌ ಮಳೆಯಾಶ್ರಿತ ಕೃಷಿ ಭೂಮಿ ಇದೆ. 20.97 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಾವಯವ ಬೆಳೆಗಳನ್ನು ಬೆಳೆಯುತ್ತಿದ್ದು, 31.99 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗುತ್ತಿದೆ. ಇನ್ನು 1 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ, 2.82 ಲಕ್ಷ ಟನ್‌ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಮುಂದಿನ ವರ್ಷದೊಳಗೆ ಸಿರಿಧಾನ್ಯ ಬೆಳೆಯುವ ಪ್ರದೇಶವನ್ನು 1.5 ಹೆಕ್ಟೇರ್‌ ಹೆಚ್ಚಿಸಿ 4 ಲಕ್ಷಕ್ಕೂ ಹೆಚ್ಚು ಮೆಟ್ರಿಕ್‌ ಟನ್‌ ಸಿರಿಧಾನ್ಯ ಬೆಳೆಯುವ ಗುರಿ ರಾಜ್ಯ ಸರ್ಕಾರ ಹೊಂದಿದೆ.

ಮಾರುಕಟ್ಟೆ ಕಲ್ಪಿಸಲು ಚಿಂತನೆ: ಇತ್ತೀಚಿನ ದಿನಗಳಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಿರಿಧಾನ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ರೈತರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುವಲ್ಲಿ ಮೇಳ ಯಶಸ್ವಿಯಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸಿರಿಧಾನ್ಯ ಬೆಳೆಯುವವರಿಗೆ ವಿಶೇಷ ಪ್ರೋತ್ಸಾಹ ಹಾಗೂ ಸೂಕ್ತ ಮಾರುಕಟ್ಟೆ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಭರವಸೆ ನೀಡಿದರು.

ಸಮಾರೋಪದಲ್ಲಿ ರಾಜ್ಯ ಸರ್ಕಾರದ ಕಾರ್ಯದರ್ಶಿ ಎಂ.ಮಹೇಶ್ವರ ರಾವ್‌, ಕೇಂದ್ರದ ಮಾಜಿ ಸಚಿವ ಸೋಮ್‌ಪಾಲ್‌ ಶಾಸ್ತ್ರಿ, ಹೈದರಾಬಾದ್‌ನ ಐಎಂಆರ್‌ ಸಂಸ್ಥೆಯ ದಯಾಕರ್‌ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

ಸಿರಿ 2019ರ ಪ್ರಶಸ್ತಿ ಪ್ರದಾನ: ಮೇಳದಲ್ಲಿ ಸಾವಯವ ಮತ್ತು ಸಿರಿಧಾನ್ಯ ಬೆಳೆಗಳಿಗೆ ಸಂಬಂಧಿಸಿದಂತೆ 7 ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ಫಲಕ, ಪ್ರಮಾಣಪತ್ರ, 30 ಸಾವಿರ ರೂ. ನಗದು ಬಹುಮಾನ ಒಳಗೊಂಡಿದ್ದು, ಸೆಂಟ್ರಲ್‌ ಫುಡ್‌ ಟೆಕ್ನಾಲಜಿ ರಿಸರ್ಚ್‌ ಇನ್‌ಸ್ಟಿಟ್ಯೂಟ್‌, ಡಾ.ಸಿ.ತಾರಾ ಸತ್ಯವತಿ, ಸಿ.ಅರುಣಾ, ಕೊಠಾರಂ ಆಗ್ರೋ ಪ್ರೈ ಲಿ., ಶೈಲಜಾ, ಇನ್ನರ್‌ ಬಿನ್‌ ವಿಲ್‌ನರ್‌ ಪ್ರೈ ಲಿ., ದಾನ್‌ ಫೌಂಡೇಶನ್‌ಗೆ ಪ್ರಶಸ್ತಿ ನೀಡಲಾಯಿತು.

ಎರಡು ವಿಭಾಗದಲ್ಲಿ ನಡೆದ ಅಡುಗೆ ಸ್ಪರ್ಧೆಯ ಮೊದಲ ವಿಭಾಗದಲ್ಲಿ ಮಾನಸ್‌ ಪ್ರಥಮ (10 ಸಾವಿರ ನಗದು), ದಿವ್ಯ ಜೈನ್‌ ದ್ವಿತೀಯ (8 ಸಾವಿರ ರೂ.), ರೂಪಾ ಬಾಲಚಂದ್ರ ತೃತೀಯ (6 ಸಾವಿರ ರೂ.); ಎರಡನೇ ವಿಭಾಗದಲ್ಲಿ ಶಿಫಾ ಫಾತೀಮಾ ಪ್ರಥಮ (10 ಸಾವಿರ ರೂ.), ಮಾನಸ್‌ ದ್ವಿತೀಯ (8 ಸಾವಿರ ರೂ.), ದಿವ್ಯಾ ಜೈನ್‌ ತೃತೀಯ (6 ಸಾವಿರ ರೂ.) ಬಹುಮಾನ ಪಡೆದರು.

ಮಳಿಗೆಗಳಲ್ಲಿ ವಹಿವಾಟು ಜೋರು: ಭಾನುವಾರ ರಜೆ ಇದ್ದ ಕಾರಣ ಮೇಳಕ್ಕೆ ಸಹಸ್ರಾರು ಮಂದಿ ಭೇಟಿ ನೀಡಿದ್ದರು. ಕೊನೆಯ ದಿನ ವಿವಿಧ ಸ್ಟಾಲ್‌ಗ‌ಳಲ್ಲಿ 6,875 ಮೆಟ್ರಿಕ್‌ ಟನ್‌ ಸಿರಿಧಾನ್ಯ ಮಾರಾಟವಾಗಿ 66.33 ಲಕ್ಷ ರೂ. ವಹಿವಾಟಾಗಿದೆ. ತಿಂಡಿ ತಿನಿಸು ಸೇರಿದಂತೆ ಎಲ್ಲಾ ಮಳಿಗೆಗಳ ಉದ್ಯಮ ವಹಿವಾಟು 15.59 ಕೋಟಿ ರೂ. ಆಗಿದೆ. ಬ್ಯಾಡಗಿ ಮೆಣಸಿನಕಾಯಿ, ಮಸಾಲೆ ಪದಾರ್ಥಗಳು, ಅರಿಶಿಣಕ್ಕೆ ಬೇಡಿಕೆ ಹೆಚ್ಚಿದ್ದು, ಆಹಾರಪ್ರಿಯರು ಸಿರಿಧಾನ್ಯದ ಎಲ್ಲಾ ಖಾದ್ಯಗಳನ್ನು ಮುಗಿಬಿದ್ದು ಸವಿದರು. 

ಸಿರಿಧಾನ್ಯ ವಹಿವಾಟು ಹೆಚ್ಚಿಸಲು ಒಕ್ಕೂಟ ರಚಿಸಲು ಸಿದ್ಧತೆ ನಡೆಸಿದ್ದು, ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ, ಸಂಸ್ಕರಣೆ, ಪ್ಯಾಕಿಂಗ್‌ ವ್ಯವಸ್ಥೆ ಸೇರಿ ಇತರೆ ಚಟುವಟಿಕೆ ಕೈಗೊಳ್ಳಲಾಗುವುದು.
-ಎನ್‌.ಎಚ್‌.ಶಿವಶಂಕರರೆಡ್ಡಿ, ಕೃಷಿ ಸಚಿವ

ಮೇಳ ಆಯೋಜನೆಗೆ 200 ಅಧಿಕಾರಿಗಳು ಎರಡು ತಿಂಗಳಿಂದ ಶ್ರಮ ವಹಿಸಿದ್ದು, ಪೂರ್ವಭಾವಿಯಾಗಿ ಹೊಸದಿಲ್ಲಿ, ಪುಣೆ, ಕೊಯಮತ್ತೂರಿನಲ್ಲಿ ರೋಡ್‌ ಶೋ ನಡೆಸಿದ ಪರಿಣಾಮ ಮೇಳ ಯಶಸ್ವಿಯಾಗಿದೆ.
-ಕೆ.ಜಿ.ಜಗದೀಶ್‌, ಕೃಷಿ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next