ಬೀದರ: ಭಾಲ್ಕಿ ತಾಲೂಕಿನ ಅಟ್ಟರ್ಗಾ ಗ್ರಾಮ ಪಂಚಾಯತನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಅರ್ಥಪೂರ್ಣವಾಗಿ ಘೋಷಿಸಲು ಸೋಮವಾರ ಗುಂಜರಗಾ ಗ್ರಾಮದಿಂದ ಅಟ್ಟರ್ಗಾ ಗ್ರಾಮದ ವರೆಗೆ ಸಚಿವರು ಹಾಗೂ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಕಾಲ್ನಡಿಗೆ ಜಾಥಾ ನಡೆಸಿದರು.
ಜಿಪಂ, ಸ್ವತ್ಛ ಭಾರತ ಮಿಷನ್, ತಾಪಂ ಮತ್ತು ಗ್ರಾಪಂ ಆಶ್ರಯದಲ್ಲಿ ಗುಂಜರಗಾ ಗ್ರಾಮದ ಶಾಲಾ ಆವರಣದಿಂದ ಬೆಳಗ್ಗೆ ಆರಂಭಗೊಂಡ “ನಮ್ಮ ನಡಿಗೆ ಸ್ವತ್ಛ ಗ್ರಾಮದೆಡೆಗೆ’ ಕಾಲ್ನಡಿಗೆ ಜಾಥಾಕ್ಕೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಎರಡು ಕಿ.ಮೀ. ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಶೌಚಾಲಯ ಕಟ್ಟಿಸಿಕೊಳ್ಳುವುದರ ಬಗ್ಗೆ ಸಾರ್ವಜನಿಕರದಲ್ಲಿ ಜನಜಾಗೃತಿ ಮೂಡಿಸಲಾಯಿತು. ಜಾಥಾದಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಂಡು ಮೆರುಗು ನೀಡಿದವು.
ತೀವ್ರಗತಿಯ ಅನುಷ್ಠಾನಕ್ಕಾಗಿ ಈ ಅಭಿಯಾನ. ಶೌಚಾಲಯ ಇಲ್ಲದ ಮನೆಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎನ್ನುವ ಬ್ಯಾನರ್‌ನಡಿ ಜಾಥಾ ನಡೆಸುವ ಮೂಲಕ ಜನರಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವುದರ ಬಗ್ಗೆ ಅರಿವು ಮೂಡಿಸಲಾಯಿತು. ಗುಂಜರರ್ಗಾ ಗ್ರಾಮದ ವಿದ್ಯಾರ್ಥಿಗಳು ಸೈಕಲ್ ಜಾಥಾ ನಡೆಸಿ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.
ಭವ್ಯ ಸ್ವಾಗತ: ಗುಂಜರಗಾದಿಂದ ಕಾಲ್ನಡಿಗೆ ಜಾಥಾ ಮೂಲಕ ಅಟ್ಟರ್ಗಾಕ್ಕೆ ಆಗಮಿಸಿದ ಸಚಿವರು ಹಾಗೂ ಅಧಿಕಾರಿಗಳಿಗೆ ಅಟ್ಟರ್ಗಾ ಗ್ರಾಮದ ಹಿರಿಯರು ಭವ್ಯ ಸ್ವಾಗತ ಕೋರಿದರು. ಮಹಿಳೆಯರು ತುಂಬಿದ ಕೊಡಗಳನ್ನು ಹೊತ್ತು ಮತ್ತು ಆರತಿ ಹಿಡಿದು ಸ್ವಾಗತ ಕೋರಿದರು. ಅಟ್ಟರ್ಗಾ ಗ್ರಾಪಂ ಸದಸ್ಯರು, ಅಧಿಕಾರಿಗಳು ಇದ್ದರು. ಗಾಂಧಿ ಜಯಂತಿ ಅಂಗವಾಗಿ ಈ ಸ್ವತ್ಛ ಭಾಲ್ಕಿ ಅಭಿಯಾನ ನಡೆಯುತ್ತಿದೆ. ಇದಕ್ಕೆ ಸಹಕರಿಸಿರಿ. ತಮ್ಮ ಮನೆಯ ಹಸಿ ಹಾಗೂ ಒಣ ತ್ಯಾಜ್ಯವನ್ನು ಪ್ರತ್ಯೇಕಿಸಿ ಪುರಸಭೆಯ ವಾಹನಕ್ಕೆ ಹಾಕಬೇಕು. ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲಬೇಡಿರಿ. ಬಯಲು ಶೌಚ ಮುಕ್ತ ಭಾಲ್ಕಿಗಾಗಿ ಪ್ರತಿ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಿರಿ. ಪ್ಲಾಸ್ಟಿಕ್ ನಿಷೇಧಿಸಿದ್ದು, ಅದನ್ನು ಬಳಸದೇ ಸಹಕರಿಸಿರಿ. ಸ್ವತ್ಛ ಭಾಲ್ಕಿ ಆರೋಗ್ಯ ಭಾಲ್ಕಿ ಸ್ವತ್ಛತೆಯೆಡೆಗೆ ಒಂದು ಹೆಜ್ಜೆ ಎಂದು ಹೇಳುತ್ತ
ಕಾಲ್ನಡಿಗೆ ಜಾಥಾದಲ್ಲಿ ಎರಡು ವಾಹನಗಳ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ಕಂಡು ಬಂದಿತು.
ಸೈಕಲ್ ಜಾಥಾ: ಇದೇ ವೇಳೆ ಗುಂಜರಗಾ ಗ್ರಾಮದಿಂದ ಅಟ್ಟರ್ಗಾವರೆಗೆ ಕಾಲ್ನಡಿಗೆ ಜಾಥಾ ನಡೆದರೆ, ಮಾಣಿಕೇಶ್ವರ
ಗ್ರಾಮದಿಂದ ಸೈಕಲ್ ಜಾಥಾ ನಡೆಯಿತು. ಇದರಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ, ಸಿಇಒ ಡಾ| ಸೆಲ್ವಮಣಿ ಆರ್., ಸ್ವತ್ಛ ಭಾರತ ಅಭಿಯಾನದ ನೋಡೆಲ್ ಅಧಿಕಾರಿ ಗೌತಮ ಅರಳಿ, ಅಧಿಕಾರಿಗಳಾದ ಬಲಭೀಮ ಕಾಂಬಳೆ, ಜಿಯಾವುಲ್ಲಾ ಕೆ, ಡಾ| ಡಿ.ಎಸ್. ಹವಾಲ್ದಾರ, ಎಂ.ಎ.ಜಬ್ಟಾರ, ಐ.ಎಸ್. ಪಾಂಚಾಳ, ಪ್ರೇಮಸಾಗರ ದಾಂಡೇಕರ, ಅವಿನಾಶ ಕೆ. ಮತ್ತಿತರರು ಇದ್ದರು.