ವಿಜಯಪುರ: ಕ್ಲೈಮೆಟ್ ಟ್ರೇಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯಲ್ಲಿ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶಕ್ಕೆ ವಿಜಯಪುರ ನಗರ 6ನೇ ಸ್ಥಾನದಲ್ಲಿದೆ.
ವಿಜಯಪುರ ನಿರೀಕ್ಷೆ ಮೀರಿ ಅಭಿವೃದ್ಧಿ ಹೊಂದಿದ್ದು, ಸದರಿ ವಿಷಯ ವಿಜಯಪುರದ ಜನರಿಗೆ ಹೆಮ್ಮೆಯ ವಿಷಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಈ ಹಿಂದೆ ವಿಜಯಪುರ ಮಹಾನಗರವನ್ನು ಧೂಳಾಪುರ ಎಂದು ಜರಿಯಲಾಗುತಿತ್ತು. ನಗರ ಶಾಸಕರ ಅಭಿವೃದ್ಧಿ ಕಾಳಜಿಯಿಂದ ವಿಜಯಪುರ ನಗರ ಇದೀಗ ಅಭಿವೃದ್ಧಿಯಲ್ಲಿ ಮಾದರಿ ನಗರವಾಗಿ ರೂಪುಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ನಗರದಲ್ಲಿನ ದುರವಸ್ಥೆಯಿಂದಾಗಿ ನಗರದ ಜನರು ಅಸ್ತಮಾ ಸೇರಿದಂತೆ ಇತರೆ ರೋಗಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ದೂಳು ಮಾಯವಾಗಿರುವ ಕಾರಣ ಜನರಿಗೆ ರೋಗಗಳಿಂದ ಮುಕ್ತಿ ಸಿಕ್ಕಿದೆ ಎಂದಿದ್ದಾರೆ.
ನಗರದಲ್ಲಿ ಉತ್ತಮ ಆರೋಗ್ಯಕ್ಕೆ ಪೂರಕವಾದ ಪರಿಸರ ನಿರ್ಮಾಣಗೊಂಡಿದೆ. ಇದರಿಂದಾಗಿ ದೇಶದಲ್ಲಿ ವಿಜಯಪುರ ನಗರ ಉತ್ತಮ ವಾತಾವರಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ನಗರ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ಗುಣಮಟ್ಟದ ರಸ್ತೆಗಳು ಅಭಿವೃದ್ಧಿಗೊಂಡಿರುವುದು, ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿರುವುದು, ಎಲ್ಲೆಂದರಲ್ಲಿದ್ದ ಇರುತ್ತಿದ್ದ ಕಸದ ರಾಶಿ, ಮಾಲಿನ್ಯ ಮಾಯವಾಗಿವೆ. ವಿದ್ಯುತ್ ಅವಘಡ ತಪ್ಪಿವೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಎಲ್ಲ ನಕಾರಾತ್ಮಕ ಲೋಪಗಳನ್ನು ಸರಿಪಡಿಸಲಾಗಿದೆ. ಇದರಿಂದಾಗಿ ಉತ್ತಮ ವಾತಾವರಣ ಮೂಡಿ, ಶುದ್ಧ ಗಾಳಿಯಿಂದಾಗಿ ವಿಜಯಪುರ ನಗರವೂ ದೇಶದಲ್ಲಿನ ಉತ್ತಮ ಗಾಳಿಯ ನಗರಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಬಂದಿದೆ ಎಂದು ಶ್ಲಾಘಿಸಲಾಗಿದೆ.